ಕುಡಿಯುವ ನೀರು ಹಾಗೂ ಮೇವಿಗಾಗಿ ಮನವಿ

ಕಡೂರು, ಜೂ.7: ತಾಲೂಕಿನ ಕೆರೆಸಂತೆ ಗ್ರಾಪಂ ವ್ಯಾಪ್ತಿಯ ಲಿಂಗ್ಲಾಪುರ ಗ್ರಾಮದ ಕುಡಿಯುವ ನೀರಿನ ಹಾಗೂ ಜಾನುವಾರುಗಳ ಮೇವಿನ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ತಹಶೀಲ್ದಾರ್ ಎಂ. ಭಾಗ್ಯ ಅವರಿಗೆ ಮನವಿ ಸಲ್ಲಿಸಿದರು.
ಬುಧವಾರ ಗ್ರಾಮದ ಮುಖಂಡ ಮರಿಯಪ್ಪ ನವರ ನೇತೃತ್ವದಲ್ಲಿ ತಾಲೂಕು ಕಛೇರಿಗೆ ಆಗಮಿಸಿದ ಗ್ರಾಮಸ್ಥರು ಲಿಂಗ್ಲಾಪುರ ಗ್ರಾಮದಲ್ಲಿ 2 ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಹಾಗೂ 700ಕ್ಕೂ ಹೆಚ್ಚು ವಿವಿಧ ಜಾನುವಾರುಗಳು ವಾಸವಾಗಿವೆ ಎಂದು ತಿಳಿಸಿದರು.
ಕಳೆದ 3 ವರ್ಷಗಳಿಂದ ಗ್ರಾಮದಲ್ಲಿ ಬರ ತಾಂಡವವಾಡುತ್ತಿದ್ದು, ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಊರಿನ ಎಲ್ಲಾ ಕೊಳವೆಬಾವಿಗಳು ಬತ್ತಿ ಹೋಗಿದ್ದು, ಇದರಿಂದ ಜನ ಜಾನುವಾರುಗಳು ನೀರಿಗಾಗಿ ಪರಿತಪಿಸುವಂತಾಗಿದ್ದು, ಕೂಡಲೇ ಕುಡಿಯುವ ನೀರಿನ ಹಾಗೂ ಮೇವಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ಈ ಸಂದರ್ಭ ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟಾನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಗೋರಕ್ಷಾ ವಿಆಭಾಗದ ನೂತನ್ ಹಿರೇನಲ್ಲೂರು, ಕಿಸಾನ್ ಸಂಘದ ಪ್ರಾಂತ ಕಾರ್ಯದರ್ಶಿ ಪರಮೇಶ್ವರಪ್ಪ, ಗ್ರಾಮಸ್ಥರಾದ ಶೇಖರಪ್ಪ, ಚಂದ್ಶೇಖರ್, ಮುನಿಯಪ್ಪ, ಮೋಹನ್‌ಕುಮಾರ್ ಉಪಸ್ಥಿತರಿದ್ದರು.





