ವಿಶ್ವ ಯೋಗ ದಿನಾಚರಣೆ : ಒಂದು ತಿಂಗಳು ಉಚಿತ ಯೋಗ ಶಿಬಿರ

ಮಡಿಕೇರಿ,ಜೂ.7 :ಆರೋಗ್ಯ ಪೂರ್ಣ ಬದುಕಿನೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣದ ಚಿಂತನೆಗಳಡಿ ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಂಡಿರುವ ವಿಶ್ವ ಯೋಗ ದಿನಾಚರಣೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಜೂ.21 ರಂದು ನಡೆಯಲಿದೆ. ಇದರ ಭಾಗವಾಗಿ ಜಿಲ್ಲೆಯಾದ್ಯಂತ ಉಚಿತ ಯೋಗ ಶಿಬಿರಗಳು ಒಂದು ತಿಂಗಳ ಕಾಲ ನಡೆಯಲಿದೆ ಎಂದು ಭಾರತೀಯ ವಿದ್ಯಾಭವನದ ಯೋಗ ಶಿಕ್ಷಕರಾದ ಕೆ.ಕೆ. ಮಹೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕೇಂದ್ರದ ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ದ ಮತ್ತು ಹೋಮಿಯೋಪತಿ(ಆಯುಷ್) ಸಚಿವಾಲಯದ ಮೂಲಕ ಯೋಗ ದಿನಾಚರಣೆೆಯನ್ನು ಆಯೋಜಿಸಲಾಗುತ್ತಿದೆ ಎಂದರು. ಪ್ರತಿ ಜಿಲ್ಲೆಯಲ್ಲಿ ಈ ಸಂಬಂಧ ಉಚಿತ ಯೋಗ ತರಬೇತಿ ಮತ್ತು ಯೋಗ ದಿನಾಚರಣೆ ನಡೆಸುವ ಜವಾಬ್ದಾರಿಯನ್ನು ವಿವಿಧ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಲಾಗಿದೆ. ಅದರಂತೆ ಕೊಡಗಿನ ಜವಾಬ್ದಾರಿಯನ್ನು ಆರ್ಟ್ ಆಫ್ ಲೀವಿಂಗ್ ಸಂಸ್ಥೆಗೆ ವಹಿಸಲಾಗಿದೆ ಎಂದು ತಿಳಿಸಿದರು.
8 ಕೇಂದ್ರಗಳಲ್ಲಿ ಯೋಗ ತರಬೇತಿ
ಆರ್ಟ್ ಆಫ್ ಲೀವಿಂಗ್‌ನ ಕೊಡಗು ಜಿಲ್ಲಾ ಯೋಗ ಶಿಕ್ಷಕರ ಸಂಯೋಜಕರಾದ ಅಳಮೇಂಗಡ ರಾಜಪ್ಪ ಮಾತನಾಡಿ, ಈ ಬಾರಿ ಜಿಲ್ಲಾ ವ್ಯಾಪ್ತಿಯ ಸೋಮವಾರಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಅಮ್ಮತ್ತಿ, ಟಿ.ಶೆಟ್ಟಿಗೇರಿ, ಮಡಿಕೇರಿ ಸೇರಿದಂತೆ ಎಂಟು ಕೇಂದ್ರಗಳಲ್ಲಿ ಉಚಿತ ಯೋಗ ತರಬೇತಿ ಶಿಬಿರ ತಿಂಗಳ ಕಾಲ ನಡೆಯಲಿದೆ ಎಂದರು.
ಬಹುತೇಕ ಕೇಂದ್ರಗಳಲ್ಲಿ ಈಗಾಗಲೆ ಚಆರಂಭವಾಗಿದ್ದು, ಮಡಿಕೇರಿಯಲ್ಲಿ ಇದೇ ಜೂ.10 ರಿಂದ ನಗರದ ಭಾರತೀಯ ವಿದ್ಯಾಭವನ್, ಬಾಲಭವನ, ಗೌಳಿಬೀದಿಯ ಆರ್ಟ್ ಆಫ್ ಲೀವಿಂಗ್ ಜಿಲ್ಲಾ ಮಾಹಿತಿ ಕೇಂದ್ರ್ರ, ಬಸಪ್ಪ ಶಿಶುವಿಹಾರ ದಾಸವಾಳ, ಸ್ವಸ್ಥ ಯೋಗ ಕೇಂದ್ರ್ರ ಮೈತ್ರಿ ಹಾಲ್, ಅಶ್ವಿನಿ ಆಸ್ಪತ್ರೆ. ಮಹದೇವಪೇಟೆಯ ವಾಸವಿ ಮಹಿಳಾ ಸಂಘ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಕಾವೇರಿ ಲೇಔಟ್ ಮತ್ತು ಅಂಬೇಡ್ಕರ್ ಭವನದಲ್ಲಿ ಉಚಿತ ಯೋಗ ತರಬೇತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆರ್ಟ್ ಆಫ್ ಲೀವಿಂಗ್‌ನ ಜಿಲ್ಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಕೀಲ ಕೆ.ಡಬ್ಲ್ಯು.ಬೋಪಯ್ಯ ಪತಂಜಲಿ, ಯೋಗ ಶಿಕ್ಷಣ ಕೇಂದ್ರದ ಯೋಗ ಶಿಕ್ಷಕರಾದ ಸಿ.ಕೆ.ಶ್ರೀಪತಿ ಮತ್ತು ಝಾನ್ಸಿ ಉಪಸ್ಥಿತರಿದ್ದರು.







