ಹತ ಹಿಝ್ಬುಲ್ ನಾಯಕನ ಅಂತ್ಯಕ್ರಿಯೆಯಲ್ಲಿ ಗ್ರೆನೇಡ್‌ನೊಂದಿಗೆ ಕಂಡಿದ್ದ ಉಗ್ರ ಶರಣು

ಶ್ರೀನಗರ,ಜೂ.7: ಕಳೆದ ತಿಂಗಳು ಭಯೋತ್ಪಾದಕ ಸಂಘಟನೆ ಹಿಝ್ಬುಲ್ ಮುಜಾಹಿದೀನ್‌ನ ಕಮಾಂಡರ್ ಸಾಬ್ಝಾರ್ ಭಟ್ ಅಂತ್ಯಕ್ರಿಯೆಯ ವೀಡಿಯೊದಲ್ಲಿ ಗ್ರೆನೇಡ್‌ನೊಂದಿಗೆ ಕಾಣಿಸಿಕೊಂಡಿದ್ದ ಉಗ್ರ ಡ್ಯಾನಿಷ್ ಅಹ್ಮದ್ ಜಮ್ಮು-ಕಾಶ್ಮೀರದ ಹಂದ್ವಾರಾದಲ್ಲಿ ಶರಣಾಗಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದರು.
ಅಹ್ಮದ್ ಉತ್ತರಾಖಂಡದ ಡೆಹ್ರಾಡೂನಿನಲ್ಲಿ ಡೂನ್ ಪಿಜಿ ಕಾಲೇಜ್ ಆಫ್ ಅಗ್ರಿಕಲ್ಚರ್ ಆ್ಯಂಡ್ ಟೆಕ್ನಾಲಜಿಯಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾನೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿರುವ ಭಟ್ ಅಂತ್ಯಕ್ರಿಯೆಯ ವೀಡಿಯೊ ತುಣುಕಿನಲ್ಲಿ ಸಂಪೂರ್ಣ ಕಪ್ಪು ದಿರಿಸು ಧರಿಸಿದ್ದ, ಕೈಯಲ್ಲಿ ಗ್ರೆನೇಡ್ ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದ ಅಹ್ಮದ್ ಕಾಣಿಸಿಕೊಂಡಿದ್ದ.
ಕಳೆದ ವರ್ಷ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದ ಹಿಝ್ಬುಲ್ ಕಮಾಂಡರ್ ಬುರ್ಹಾನ್ ವಾನಿಯ ಉತ್ತರಾಧಿಕಾರಿಯಾಗಿದ್ದ ಭಟ್ ಮೇ 27ರಂದು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಗುಂಡಿಗೆ ಬಲಿಯಾಗಿದ್ದ.
ತಾನು ಸಾಮಾಜಿಕ ಮಾಧ್ಯಮಗಳಲ್ಲಿ ದಕ್ಷಿಣ ಕಾಶ್ಮೀರದ ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದೆ ಮತ್ತು ಅವರಿಂದ ಪ್ರಚೋದನೆ ಪಡೆದಿದ್ದೆ ಎಂದು ಅಹ್ಮದ್ ವಿಚಾರಣೆ ವೇಳೆ ಬಹಿರಂಗಗೊಳಿಸಿರುವುದಾಗಿ ಪೊಲೀಸರು ತಿಳಿಸಿದರು.
ವೀಡಿಯೊ ಬಹಿರಂಗಗೊಂಡ ಬಳಿಕ ಪೊಲೀಸರು ಅಹ್ಮದ್‌ನ ಕುಟುಂಬವನ್ನು ಸಂಪರ್ಕಿಸಿದ್ದರು.







