ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕನಿಂದ ಅವ್ಯವಹಾರದ ಆರೋಪ ; ಕೊನೆಗೊಂಡ ಧರಣಿ

ಸೊರಬ,ಜೂ.7: ತಾಲ್ಲೂಕಿನ ತತ್ತೂತು ಗ್ರಾಮದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಮನೆ ಸಾಲದ ಮಂಜೂರಾತಿಯಲ್ಲಿ ಒಂದು ಲಕ್ಷ ರೂಪಾಯಿಗಳ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಕಳೆದ ಮೂರು ದಿನದಿಂದ ನಡೆಸುತ್ತಿದ್ದ ನಿರಂತರ ಧರಣಿ ಸತ್ಯಾಗ್ರಹ ಬ್ಯಾಂಕ್‌ನ ಹಿರಿಯ ಅಧಿಕಾರಿಯ ಮಧ್ಯಸ್ಥಿಕೆಯಿಂದಾಗಿ ಬುಧವಾರ ಕೊನೆಗೊಂಡಿದೆ.
ರೈತ ಸಂಘದ ಬೆಂಬಲದೊಂದಿಗೆ ಕಮಲಮ್ಮ ಬ್ಯಾಂಕಿನ ಮುಂಭಾಗದಲ್ಲಿ ಕಳೆದ ಮೂರು ದಿನದಿಂದ ತಮಗೆ ಬ್ಯಾಕ್‌ನಿಂದ ಮೋಸವಾಗಿದ್ದು ಅದನ್ನು ಸರಿಪಡಿಸಬೇಂಕೆಂದು ಅಗ್ರಹಿಸಿ ಧರಣಿ ನಡೆಸುತ್ತಿದ್ದರು.
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ಜಿಲ್ಲಾ ಪ್ರಬಂಧಕ ಕೆ.ಪಿ.ಶೆಟ್ಟಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಕಮಲಮ್ಮ ಎನ್ನುವವರಿಗೆ ಬ್ಯಾಂಕ್‌ನಿಂದ ಗೃಹ ಸಾಲಕ್ಕಾಗಿ ರೂ5 ಲಕ್ಷ ಮಂಜೂರಾಗಿತ್ತು. ತಲಾ 1 ಲಕ್ಷದಂತೆ ಮೂರು ಬಾರಿ ಮೂರು ಲಕ್ಷ ಹಣವನ್ನು ಪಡೆದಿರುವ ಬಗ್ಗೆ ಬ್ಯಾಂಕ್‌ನಲ್ಲಿ ದಾಖಲಾಗಿದೆ. ಆದರೆ ಕೊನೆ ಬಾರಿ ಪಡೆದ 1 ಲಕ್ಷ ಹಣ ತಮಗೆ ತಲುಪಿಲ್ಲ ಎಂದು ಆಪಾದಿಸುತ್ತಿದ್ದಾರೆ. ಈ ವಿಷಯವನ್ನು ತಹಶೀಲ್ದಾರ್ ಗಮನಕ್ಕೆ ಹೋಗಿದ್ದು, ತಹಶೀಲ್ದಾರ್ ಕೋರಿಕೆಯಂತೆ ತಾಲೂಕು ಕಛೇರಿಗೆ ತೆರಳಿ ಚರ್ಚಿಸಿದ ನಂತರ ತನಿಖೆ ನಡೆಸುವಂತೆ ಹೇಳಿದ್ದಾರೆ.ತಹಶೀಲ್ದಾರ್ ಸೂಚನೆಯಂತೆ ತನಿಖೆ ನಡೆಸಲಾಗುವುದು ಎಂದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥಗೌಡ ಮಾತನಾಡಿ, ಕಮಲಮ್ಮರವರಿಗೆ ಬ್ಯಾಂಕ್‌ನಿಂದ ಮೋಸವಾಗಿರುವ ಬಗ್ಗೆ ವಿಚಾರಿಸಿದಾಗ ದಾಖಲೆಗಳ ಪ್ರಕಾರ ಅವರಿಗೆ ಕೊಟ್ಟ ಹಣ ಸರಿಯಾಗಿದೆ ಎಂದು ಬ್ಯಾಕ್ ಸಿಬ್ಬಂದಿಗಳ ವಾದವಾಗಿತ್ತು. ದಾಖಲೆಗಳನ್ನು ಕೊಂಡೆ ಬ್ಯಾಂಕ್‌ನವರು ಮೋಸಮಾಡಿದ್ದಲ್ಲದೇ, ವಕೀಲರ ಮೂಲಕ ಬ್ಯಾಂಕ್‌ಗೆ ಹಣ ಮರುಪಾವತಿಸುವಂತೆ ನೋಟೀಸ್ ನೀಡಿ ಹೆದರಿಸುತ್ತಿದ್ದಾರೆ. ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ರವರಿಗೂ ಬ್ಯಾಂಕ್‌ನವರ ಈ ಕ್ರಮವನ್ನು ಖಂಡಿಸಿ ಮನವಿ ಸಲ್ಲಿಸಲಾಗಿತ್ತು. ಮೋಸಹೊದ ಕಮಲಮ್ಮನವರನ್ನು ರೈತ ಸಂಘದಿಂದ ಬೆಂಬಲ ಸೂಚಿಸಿ ಕಳೆದ ಮೂರು ದಿನಗಳಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೆವು. ಒಂದು ವಾರದೊಳಗೆ ನೊಂದ ಮಹಿಳೆಗೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಬ್ಯಾಂಕ್ ಶಾಖೆಗೆ ಬೀಗ ಜಡಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಸತೀಶ್ ರಾವ್, ಶಿವಮೊಗ್ಗ ಪ್ರಾದೇಶಿಕ ಕಛೇರಿಯ ವ್ಯವಸ್ಥಾಪಕ ಬಿ.ಆರ್. ಶಂಕರಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಜಿ.ಗಣೇಶಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ಉಮೇಶ್ ಪಾಟೀಲ್,ಕಾರ್ಯಾಧ್ಯಕ್ಷ ಶಿವಪ್ಪ ಹುಣಸವಳ್ಳಿ, ಉಪಾಧ್ಯಕ್ಷ ಈಶ್ವರಪ್ಪ ಕೊಡಕಣಿ, ಪ್ರಧಾನ ಕಾರ್ಯದರ್ಶಿ ಇಂಧೂಧರ, ಶಿವಪುತ್ರಪ್ಪ ತತ್ತೂರು, ಮಂಜಪ್ಪ ಬಾರಂಗಿ,ಹನುಮಂತಪ್ಪ,ವೀರನಗೌಡ ಗಿಣಿವಾಲ, ಎಚ್,ಎಸ್.ಬಸವರಾಜಪ್ಪ ತತ್ತೂರು, ರಾಜು ಪೂಜಾರ್,ಮೇಘರಾಜ್ ಗೌಡ, ಶಿವಮೂರ್ತಿ ಸಾಹುಕಾರ್ ಬಾರಂಗಿ, ಸಮದ್‌ಸಾಬ್, ಬಾಷಾಸಾಬ್, ಪಾಲಾಕ್ಷಪ್ಪ, ಪಕೀರಪ್ಪ
ಮತ್ತಿತರರಿದ್ದರು.







