ಜೂ.15ರೊಳಗೆ ಅತಿಥಿ ಉಪನ್ಯಾಸಕರ ನೇಮಕ: ತನ್ವೀರ್ ಸೇಠ್

ಬೆಂಗಳೂರು, ಜೂ. 7: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಜೂ.15ರೊಳಗೆ ಅಗತ್ಯವಿರುವ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಭರವಸೆ ನೀಡಿದ್ದಾರೆ.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಐಹೋಳೆ ಮಹಾಲಿಂಗಪ್ಪ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಅತಿಥಿ ಶಿಕ್ಷಕರ ನೇಮಕ ಸಂಬಂಧ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದು, ವಿದ್ಯಾರ್ಥಿಗಳ ಬೋಧನೆಗೆ ಶಿಕ್ಷಕರ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಒಟ್ಟು 72 ಆದರ್ಶ ಶಾಲೆಗಳಿದ್ದು, ಆ ಶಾಲೆಗಳ ಪ್ರವೇಶಕ್ಕೆ ಪೈಪೋಟಿ ಆರಂಭವಾಗಿದ್ದು, ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.
ಎಲ್ಲ ಸದಸ್ಯರು ಅಪೇಕ್ಷೆ ಪಟ್ಟರೆ ಹೋಬಳಿಗೊಂದರಂತೆ ಆದರ್ಶ ಶಾಲೆಯನ್ನು ಪ್ರಾರಂಭಿಸಲಾಗುವುದು ಎಂದ ಅವರು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಶೇ.30 ರಷ್ಟು ಅನುದಾನವನ್ನು ಶಾಲಾ ದುರಸ್ತಿಗೆ ನೀಡಬೇಕು. ಈ ಸಂಬಂಧ ನಿಯಮಾವಳಿಗೆ ಬದಲಾವಣೆ ಮಾಡಲಾಗುವುದು. ಅಲ್ಲದೆ, ಕೈಗಾರಿಕೆಗಳ ಸಿಎಸ್‌ಆರ್ ನಿಧಿ ಬಳಕೆಗೆ ನಿಯಮ ರೂಪಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ 19 ಸಾವಿರ ಶಾಲೆಗಳಿಗೆ ಬೇಡಿಕೆ ಇದ್ದು, 36 ಸಾವಿರ ಶಾಲಾ ಕೊಠಡಿಗಳು ಶಿಥಿಲವಾಗಿದ್ದು, ಅವುಗಳನ್ನು ಕೆಡವಿ ಮರು ನಿರ್ಮಾಣ ಮಾಡಬೇಕಿದೆ ಎಂದ ಅವರು, 31 ಸಾವಿರ ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಬೇಕಿದೆ ಎಂದು ಹೇಳಿದರು.
ಸರಕಾರಿ ಶಾಲೆಗಳನ್ನು ಬಲವರ್ಧನೆ ಮಾಡಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಶಾಸಕ ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದರ ಜತೆಗೆ ಉತ್ತಮ ಫಲಿತಾಂಶ ಬರಬೇಕೆಂಬ ಉದ್ದೇಶದಿಂದ ಆ ಶಾಲೆಗಳನ್ನು ಆರಂಭಿಸಬೇಕಾಗುತ್ತದೆ ಎಂದರು.
.







