ಮಹಿಳಾ ಪಿಎಸ್ಸೈ ಜೊತೆ ಬಿಜೆಪಿ ಶಾಸಕನ ಅನೈತಿಕ ಸಂಬಂಧ
ಮಹಿಳಾ ಆಯೋಗಕ್ಕೆ ಶಾಸಕನ ಪತ್ನಿ ದೂರು
ಬೆಂಗಳೂರು, ಜೂ. 7: ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪರಾಜು, ಮಹಿಳಾ ಪಿಎಸ್ಸೈ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆಂದು ಶಾಸಕನ ಪತ್ನಿ ಸೌಮ್ಯ, ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿರುವ ಅಂಶ ಇದೀಗ ಬೆಳಕಿಗೆ ಬಂದಿದೆ.
ತನ್ನ ಪತಿಯಿಂದ ತನಗೆ ಜೀವ ಬೆದರಿಕೆಯಿದ್ದು, ಸೂಕ್ತ ರಕ್ಷಣೆ ಕಲ್ಪಿಸಬೇಕು. ಹಾಗೂ ಪತಿಯನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕು ಎಂದು ಶಾಸಕ ತಿಪ್ಪರಾಜು ಅವರ ಪತ್ನಿ ಸೌಮ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಆದರೆ, ಇದೀಗ ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ತಾನು ಯಾವುದೇ ದೂರು ನೀಡಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.
ಈ ಸಂಬಂಧ ಸ್ಪಷ್ಟಣೆ ನೀಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ತಮಗೆ ದೂರು ಬಂದಿರುವುದು ಸತ್ಯ. ಆದರೆ, ಶಾಸಕರ ಪತ್ನಿ ಹೆಸರಿನಲ್ಲಿ ಯಾವುದೇ ಪತ್ರ ಬಂದಿಲ್ಲ. ಹೀಗಾಗಿ ಪ್ರಕರಣ ತನಿಖೆಗೆ ಸೂಚನೆ ನೀಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪಿಎಸ್ಸೈ: ಶಾಸಕ ತಿಪ್ಪರಾಜು ಮಹಿಳಾ ಪಿಎಸ್ಸೈಯೊಂದಿಗೆ ಬಹುದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಈ ಬಗ್ಗೆ ಶಾಸಕ ತಿಪ್ಪರಾಜು ಮತ್ತು ಪತ್ನಿ ಸೌಮ್ಯ ಮಧ್ಯೆ ಜಗಳ ನಡೆದಿದ್ದು, ರಾಜಿ-ಪಂಚಾಯತ್ ನಡೆದಿತ್ತು ಎಂದು ಹೇಳಲಾಗಿದೆ.
ಕಳವು ಆರೋಪದ ಮೇಲೆ ಠಾಣೆಗೆ ವ್ಯಕ್ತಿಯೊಬ್ಬನನ್ನು ಕರೆತಂದು ರಾಯಚೂರು ಎಪಿಎಂಸಿ ಠಾಣಾ ಮಹಿಳಾ ಪಿಎಸ್ಸೈ ಹಿಗ್ಗಾಮುಗ್ಗಾ ಥಳಿಸಿ ಸುದ್ದಿ ಆಗಿದ್ದರು. ಈ ಸಂದರ್ಭದಲ್ಲಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಗೃಹ ಸಚಿವರ ಮೇಲೆ ಒತ್ತಡ ತಂದು ಶಾಸಕ ತಿಪ್ಪರಾಜು ಅದೇ ಸ್ಥಳದಲ್ಲೆ ಮರು ನಿಯೋಜನೆ ಮಾಡಿಸಿದ್ದರು.
ಶಾಸಕರ ಪತ್ನಿ ಸೌಮ್ಯ ಮನೆಯಲ್ಲಿ ಇಲ್ಲದ ವೇಳೆ ಮಹಿಳಾ ಪಿಎಸ್ಸೈ ಮತ್ತು ತಿಪ್ಪರಾಜು ಸೇರುತ್ತಿದ್ದರು. ಇದು ರಾಯಚೂರಿನಲ್ಲಿ ದೊಡ್ಡ ಸುದ್ದಿಯಾದ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್ಸೈ ಪೊಲೀಸ್ ಇಲಾಖೆಯಿಂದ ಇದೀಗ ಇಂಧನ ಇಲಾಖೆ ವಿಚಕ್ಷಣ ದಳಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದು, ಕಲಬುರ್ಗಿ ಜೆಸ್ಕಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.
ನಾನು-ನನ್ನ ಪತ್ನಿ ಅನ್ಯೋನ್ಯವಾಗಿದ್ದು ನಮ್ಮ ತೇಜೋವಧೆಗಾಗಿ ಯಾರೋ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಆರೋಪದಲ್ಲಿ ಹುರುಳಿಲ್ಲ. ರಾಜಕೀಯ ವಿರೋಧಿಗಳು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಆಯೋಗದ ಅಧ್ಯಕ್ಷರು ತನ್ನ ಗಮನಕ್ಕೆ ತರದೆ ಮಾಧ್ಯಮಗಳಿಗೆ ಪತ್ರ ಬಿಡುಗಡೆ ಮಾಡಿರುವುದು ಸಲ್ಲ. ಈ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ’
-ತಿಪ್ಪರಾಜು ಬಿಜೆಪಿ ಶಾಸಕ







