ಮಂಗಳೂರು: ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಇಫ್ತಾರ್ ಸ್ನೇಹ ಕೂಟ

ಮಂಗಳೂರು, ಜೂ. 7: ಧಾರ್ಮಿಕ ಗ್ರಂಥಗಳಲ್ಲಿರುವ ವಿಚಾರಗಳು ಮಕ್ಕಳಿಗೆ ಸರಿಯಾಗಿ ಅರ್ಥ ಮಾಡಿಸುವ ಕಾರ್ಯ ನಡೆಯಬೇಕು ಎಂದು ಕೇಮಾರು ಶ್ರೀ ಈಶವಿಠಲ ದಾಸ ಸ್ವಾಮೀಜಿ ಹೇಳಿದರು.
ಅವರು ನಗರದ ಬಂದರಿನ ಹಿದಾಯತ್ ಸೆಂಟರ್‍ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವತಿಯಿಂದ ನಡೆದ ಇಫ್ತಾರ್ ಸ್ನೇಹ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಧಾರ್ಮಿಕ ವಿಚಾರಗಳನ್ನು ತಿಳಿದುಕೊಳ್ಳುವುದರಿಂದ ಪ್ರೀತಿ, ಕ್ಷಮಾ ಗುಣಗಳನ್ನು ಬೆಳೆಸಿಕೊಳ್ಳಬಹುದು, ಆ ಮೂಲಕ ಸಮಾಜದಲ್ಲಿ ಹುಟ್ಟುವ ಅಶಾಂತಿಗೆ ಉತ್ತರ ನೀಡುವ ಜತೆಗೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ನೀಡುವುದು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಇನ್ನೋರ್ವ ಅತಿಥಿ ಮಂಗಳೂರು ವಿವಿ ಕಾಲೇಜಿನ ಪ್ರಿನಿಪ್ಸಾಲ್ ಡಾ. ಉದಯ ಕುಮಾರ್ ಇರ್ವತ್ತೂರು ಮಾತನಾಡಿ, ರಮಝಾನ್ ತಿಂಗಳ ಉಪವಾಸದಿಂದ ದೇಹ, ಮನಸ್ಸಿನ ಮೇಲೆ ನಿಯಂತ್ರಣ ಮಾಡುವ ಕೆಲಸ ನಡೆಯುತ್ತದೆ. ಜಾತಿ, ಮತ, ಧರ್ಮಗಳ ತಿಕ್ಕಾಟ, ಅಪನಂಬಿಕೆಯನ್ನು ಬಿಟ್ಟು ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂದರು.
ನಮ್ಮ ಟಿ.ವಿ. ನಿರ್ದೇಶಕರಾದ ಡಾ. ಶಿವಶರಣ್ ಶೆಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಮುಖ್ಯ ಅಥಿತಿಗಳಾಗಿ ಮಾತನಾಡಿದರು.
ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್‍ನ ಅಧ್ಯಕ್ಷ ಮುಹಮ್ಮದ್ ಕುಂಞ ರಮಝಾನ್ ಸಂದೇಶ ನೀಡಿದರು. ಮಂಗಳೂರು ಯೂನಿಟಿ ಹೆಲ್ತ್ ಕಾಂಪ್ಲೆಕ್ಸ್ ನಿರ್ದೇಶಕ ಡಾ. ಸಿ.ಪಿ. ಹಬೀಬ್ ರೆಹಮಾನ್ ಸಮಾರೋಪ ಮಾತುಗಳನ್ನಾಡಿದರು. ಅಬ್ದುಲ್ ಗಫೂರ್ ರ್ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.







