ಯುರೋಪಿಯನ್ನರನ್ನು ಭಯೋತ್ಪಾದನೆಗೆ ನೂಕುವುದು ಇಸ್ಲಾಮ್ ಅಲ್ಲ: ಫ್ರಾನ್ಸ್‌ನ ಭಯೋತ್ಪಾದನೆ ಪರಿಣತರ ವಿಶ್ಲೇಷಣೆ

ಅಂಕಾರ, ಜೂ. 7: ಇತ್ತೀಚೆಗೆ ಮ್ಯಾಂಚೆಸ್ಟರ್‌ನ ಸಂಗೀತ ಕಾರ್ಯಕ್ರಮವೊಂದರಲ್ಲಿ ಬಾಂಬ್ ಸ್ಫೋಟಿಸಿ 22 ಜನರ ಹತ್ಯೆಗೈದ ಸಲ್ಮಾನ್ ಅಬೇದಿಯ ಹೆತ್ತವರು ಎರಡು ದಶಕಗಳ ಹಿಂದೆ ಗದ್ದಾಫಿಯ ಲಿಬಿಯವನ್ನು ತೊರೆದು ಬ್ರಿಟನ್‌ಗೆ ಬಂದು ನೆಲೆಸಿದವರು. ತಮ್ಮ ಮಗನಿಗೆ ಉತ್ತಮ ಬದುಕು ಸಿಕ್ಕಿದೆ ಎಂಬುದಾಗಿ ಅವರು ಭಾವಿಸಿದ್ದರು.
ಆದರೆ, ವಾಸ್ತವಿಕವಾಗಿ ಅದೊಂದು ರೀತಿಯ ನಿರ್ವಸತಿಯಾಗಿದ್ದು 20 ವರ್ಷಗಳ ಬಳಿಕ ಅಬೇದಿಯ ಸಮತೋಲನವನ್ನು ಕದಡಿತು ಎಂದು ಭಯೋತ್ಪಾದನೆ ಕುರಿತ ಫ್ರಾನ್ಸ್‌ನ ಉನ್ನತ ಪರಿಣತರ ಪೈಕಿ ಒಬ್ಬರಾಗಿರುವ ಒಲಿವಿಯರ್ ರಾಯ್ ಹೇಳುತ್ತಾರೆ.
‘‘ಯುರೋಪ್‌ನಲ್ಲಿ ಹಿಂಸಾತ್ಮಕ ಭಯೋತ್ಪಾದನೆಯನ್ನು ಅಪ್ಪಿಕೊಳ್ಳುವವರ ಪೈಕಿ ಸುಮಾರು 60 ಶೇಕಡ ತಮ್ಮ ಮೂಲ ದೇಶದೊಂದಿಗೆ ಸಂಪರ್ಕ ಕಡಿದುಕೊಂಡ ಎರಡನೆ ತಲೆಮಾರಿನ ಮುಸ್ಲಿಮರಾಗಿದ್ದಾರೆ. ಅವರು ಪಾಶ್ಚಾತ್ಯ ಸಮಾಜಗಳೊಂದಿಗೆ ಹೊಂದಿಕೊಳ್ಳಲು ವಿಫಲರಾಗಿದ್ದಾರೆ’’ ಎಂದು ರಾಯ್ ಹೇಳುತ್ತಾರೆ.
ಅವರು ‘ಸಂಸ್ಕೃತಿವಿಹೀನತೆಯ ಪ್ರಕ್ರಿಯೆ’ಗೆ ಒಳಗಾಗುತ್ತಿದ್ದು, ಯುರೋಪಿಯನ್ ಸಮಾಜ ಮತ್ತು ತಮ್ಮ ಮೂಲ- ಈ ಎರಡರ ಬಗ್ಗೆಯೂ ಅವರಿಗೆ ಯಾವುದೇ ತಿಳುವಳಿಕೆಯಿಲ್ಲ ಹಾಗೂ ಎರಡರಿಂದಲೂ ಅವರು ವಿಮುಖತೆ ಒಳಗಾಗುತ್ತಿದ್ದಾರೆ. ಅದರ ಫಲಿತಾಂಶವಾಗಿ ಅಪಾಯಕಾರಿ ‘ಅಸ್ತಿತ್ವ ಶೂನ್ಯತೆ’ಗೆ ಅವರು ಒಳಗಾಗುತ್ತಿದ್ದಾರೆ ಹಾಗೂ ಇಂಥ ಪರಿಸ್ಥಿತಿಯಲ್ಲಿ ಅವರು ಸುಲಭವಾಗಿ ‘ಹಿಂಸಾತ್ಮಕ ಉಗ್ರವಾದ’ದತ್ತ ವಾಲುತ್ತಾರೆ.
1994ರಲ್ಲಿ ಬ್ರಿಟನ್‌ನಲ್ಲಿ ಜನಿಸಿದ ಅಬೇದಿ, ಒಂದು ಹಂತದ ಬದುಕಿನ ಬಳಿಕ ಹಿಂಸಾತ್ಮಕ ಮೂಲಭೂತವಾದದತ್ತ ವಾಲಿದನು. ಒಂದು ಕಡೆ ಆತ ಲಿಬಿಯದೊಂದಿಗೆ ಮರುಸಂಪರ್ಕ ಹೊಂದಲು ಪ್ರಯತ್ನಿಸಿದನು ಹಾಗೂ ಇನ್ನೊಂದು ಕಡೆ ಬ್ರಿಟಿಶ್ ಯುವಜನರನ್ನು ಅನುಕರಿಸಲು ಪ್ರಯತ್ನಿಸಿದನು.
‘‘ಅಬೇದಿಯಂಥ ಎರಡನೆ ತಲೆಮಾರಿನವರಿಗೆ ವ್ಯತಿರಿಕ್ತವಾಗಿ, ಮೂರನೆ ತಲೆಮಾರಿನವರು ಸಾಮಾನ್ಯವಾಗಿ ಪಾಶ್ಚಾತ್ಯರೊಂದಿಗೆ ಹೆಚ್ಚು ಬೆರೆಯುತ್ತಾರೆ ಹಾಗೂ ಸ್ವದೇಶದಲ್ಲೇ ಬೆಳೆದ ಭಯೋತ್ಪಾದಕರಲ್ಲಿ ಇವರ ಪ್ರಮಾಣ 15 ಶೇಕಡಕ್ಕಿಂತ ಹೆಚ್ಚಿರುವುದಿಲ್ಲ’’ ಎಂದು ಒಲಿವಿಯರ್ ಅಭಿಪ್ರಾಯಪಡುತ್ತಾರೆ.







