ಅಪಸ್ವರ ಎತ್ತುವ ಮುಖಂಡರ ವಿರುದ್ಧ ಕಠಿಣ ಕ್ರಮ: ಪರಮೇಶ್ವರ್ ಎಚ್ಚರಿಕೆ

ಬೆಂಗಳೂರು,ಜೂ.7: ಕಾಂಗ್ರೆಸ್ ಪಕ್ಷದೊಳಗೆ ಅಪಸ್ವರ ಮತ್ತು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಮುಖಂಡರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಧಾನಸಭೆಯ ಚುನಾವಣೆ ಸಮೀಪಿಸುತ್ತಿದೆ. ಈ ವೇಳೆಯಲ್ಲಿ ಯುವ ಕಾಂಗ್ರೆಸ್, ಮೈನ್ ಕಾಂಗ್ರೆಸ್‌ನಲ್ಲಿ ಪಕ್ಷದ ಒಗ್ಗಟ್ಟಿಗೆ ಮಾರಕವಾಗುವ ಭಿನ್ನ ಮಾತುಗಳನ್ನು ವ್ಯಕ್ತಪಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ನಮ್ಮಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ ಅಸಮಾಧಾನ ಬೇಡ. ಭಿನ್ನಾಭಿಪ್ರಾಯಗಳನ್ನು ಮರೆತು ಸೋಲು ಗೆಲುವನ್ನು ಬದಿಗಿಟ್ಟು ನಾವೆಲ್ಲರೂ ಕಾಂಗ್ರೆಸ್ಸಿಗರು ಎಂಬ ಭಾವನೆಯಿಂದ ಪಕ್ಷವನ್ನು ಕಟ್ಟಬೇಕು ಎಂದು ನೂತನ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ಜಾತ್ಯತೀತ ಸಮಾಜ ನಿರ್ಮಾಣ ಮಾಡಬೇಕು ಎಂದು ರಾಜೀವ್‌ಗಾಂಧಿ ಕನಸು ಕಂಡಿದ್ದರು. ಈ ಕನಸನ್ನು ನನಸು ಮಾಡಲು ರಾಹುಲ್ ಗಾಂಧಿ ಅವರನ್ನು ಮುಂದಿನ ಪ್ರಧಾನಿಯಾಗಿ ಮಾಡಬೇಕು. ಇದಕ್ಕಾಗಿ ಯುವಕಾಂಗ್ರೆಸ್ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.
ರಾಜ್ಯ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ವಿಧಾನ ಪರಿಷತ್ತಿನ ಸದಸ್ಯ ರಿಜ್ವಾನ್ ಹರ್ಷದ್ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಒಗ್ಗಟ್ಟನ್ನು ಹೋಳು ಮಾಡಲು ಹುನ್ನಾರಗಳು, ಪಿತೂರಿಗಳು ನಡೆಯುವುದು ಸಾಮಾನ್ಯ. ಇಂತಹ ಕುತಂತ್ರಗಳಿಗೆ ಕಿವಿಗೊಡದೆ ಪಕ್ಷದ ಸಂಘಟನೆಗೆ ಶ್ರಮಿಸಬೇಕು ಎಂದು ತಿಳಿಸಿದರು.





