ಎನ್ ಡಿ ಟಿವಿ ಮೇಲಿನ ದಾಳಿ ಹಿಂದಿನ 'ಸಂಜಯ್ ದತ್ '!

ಹೊಸದಿಲ್ಲಿ, ಜೂ.7: ಎನ್ ಡಿಟಿವಿ ಸಹ ಸಂಸ್ಥಾಪಕ ಪ್ರಣಯ್ ರಾಯ್ ಅವರ ನಿವಾಸದ ಮೇಲೆ ನಡೆದ ಸಿಬಿಐ ದಾಳಿಗೆ “ಸಂಜಯ್ ದತ್” ಅವರ ಆರೋಪಗಳೇ ಮುಖ್ಯ ಕಾರಣ. ಐಸಿಐಸಿಐ ಬ್ಯಾಂಕ್ ನಿಂದ ಪಡೆದಿದ್ದ 48 ಕೋ.ರೂ, ಸಾಲ ಮರುಪಾವತಿ ಮಾಡಿಲ್ಲ ಎನ್ನುವ ಆರೋಪದ ಹಿನ್ನೆಲೆಯಲ್ಲಿ ನಡೆದಿದ್ದ ದಾಳಿಯ ಹಿಂದೆ ಸಂಜಯ್ ದತ್ ನೀಡಿದ್ದ ದೂರು ಪ್ರಮುಖ ಪಾತ್ರ ವಹಿಸಿದೆ. ಅಷ್ಟಕ್ಕೂ ಈ ಸಂಜಯ್ ದತ್ ಸಿನೆಮಾ ನಟನಲ್ಲ, ಬದಲಾಗಿ ಚಾರ್ಟರ್ಡ್ ಅಕೌಂಟೆಂಟ್.
ಸ್ಟಾಕ್ ಬ್ರೋಕಿಂಗ್ ಸಂಸ್ಥೆಯೊಂದನ್ನು ನಡೆಸುತ್ತಿರುವ ಗ್ರೇಟರ್ ಕೈಲಾಶ್ ನಿವಾಸಿ ಸಿಎ ಸಂಜಯ್ ದತ್ ಅವರು ತೆರಿಗೆ ವಂಚನೆಮ ಹಣದ ದುರ್ಬಳಕೆ ಹಾಗೂ ಎಫ್ ಇಎಂಎ ಉಲ್ಲಂಘನೆಗೆ ಸಂಬಂಧಿಸಿ ಎನ್ ಡಿಟಿವಿ ಪ್ರವರ್ತಕರ ವಿರುದ್ಧ ಆದಾಯ ತೆರಿಗೆ ಇಲಾಖೆ, ಸೆಬಿ,
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಜಾರಿ ನಿರ್ದೇಶನಾಲಯಕ್ಕೆ ಸರಣಿ ದೂರುಗಳನ್ನು ಸಲ್ಲಿಸಿದ್ದರು.
ದತ್ ಅವರ ಒಂದು ದೂರಿನ ಹಿನ್ನೆಲೆಯಲ್ಲಿ ಪ್ರಣಯ್ ರಾಯ್ ಹಾಗೂ ರಾಧಿಕಾ ರಾಯ್ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿತ್ತು.
2013ರ ಜನವರಿಯಲ್ಲಿ ವಂಚನೆ ಹಾಗೂ ವ್ಯಾಪಾರದಲ್ಲಿ ನ್ಯಾಯಸಮ್ಮತವಲ್ಲದ ಕ್ರಮಕ್ಕೆ ಸಂಬಂಧಿಸಿ ಸೆಬಿ ಸಂಜಯ್ ದತ್ ಹಾಗು ಪತ್ನಿ ಪ್ರಣೀತಾ ವಿರುದ್ಧ ಪ್ರಕರಣ ದಾಖಲಿಸಿ 48 ಲಕ್ಷ ರೂ. ದಂಡ ವಿಧಿಸಿತ್ತು. ಪ್ರಣಯ್ ರಾಯ್ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಎನ್ ಡಿಟಿವಿ ಸಂಜಯ್ ದತ್ ರನ್ನು “ಅತೃಪ್ತ ಮಾಜಿ ಸಲಹೆಗಾರ” ಎಂದು ಬಣ್ಣಿಸಿದ್ದು, ಅವರ ಆರೋಪಗಳು “ಕಳಪೆ” ಎಂದಿತ್ತು. ಸುಳ್ಳು ಆರೋಪಗಳನ್ನು ಮಾಡುವ ಅವರು ಇದೇ ಆರೋಪಗಳೊಂದಿಗೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದಾರೆ” ಎಂದು ಎನ್ ಡಿಟಿವಿ ಹೇಳಿತ್ತು.







