ಫೋನ್ ಕದ್ಧಾಲಿಕೆ ವಿಧಾನಸಭೆಯಲ್ಲಿ ಪ್ರತಿಧ್ವನಿ
ಬೆಂಗಳೂರು, ಜೂ. 7: ಪೊಲೀಸ್ ಅಧಿಕಾರಿ ಫೋನ್ ಕದ್ಧಾಲಿಕೆ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆ ಆಡಳಿತ ಸುಧಾರಣೆಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ ಪ್ರಸಂಗ ನಡೆಯಿತು.
ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಗದೀಶ್ ಶೆಟ್ಟರ್, ಐಜಿ ಚರಣ್ ರೆಡ್ಡಿ ಅವರ ಫೋನ್ ಕದ್ದಾಲಿಸಿದಲ್ಲದೆ, ಆ ಸಂಭಾಷಣೆಯನ್ನು ಧ್ವನಿ ಮುದ್ರಿಸಿ ಸಾಮಾಜಿಕ ಜಾಣತಾಣಗಳಲ್ಲಿ ಹರಿಯಬಿಡಲಾಗಿದೆ. ಈ ಬಗ್ಗೆ ರಾಜ್ಯ ಸರಕಾರ ಕೂಡಲೇ ಸ್ಪಷ್ಟಣೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ಈ ಹಿಂದೆ ದೂರು ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಇದೀಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ.ದತ್ತ ತನಿಖೆಗೆ ಆದೇಶಿಸಿದ್ದಾರೆ. ಈ ಹಿಂದೆ ಟೆಲಿಪೋನ್ ಕದ್ಧಾಲಿಕೆ ಪ್ರಕರಣ ರಾಮಕೃಷ್ಣ ಹೆಗಡೆ ಅವರನ್ನು ಅಧಿಕಾರದಿಂದಲೇ ಕೆಳಗಿಳಿಸಿತ್ತು ಎಂದು ಸ್ಮರಿಸಿದರು.
ಫೋನ್ ಕದ್ಧಾಲಿಕೆ ಪ್ರಕರಣವನ್ನು ಗಮನಿಸಿದರೆ ಇಲಾಖೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದನ್ನು ತೋರಿಸುತ್ತದೆ. ಅಧಿಕಾರಿಗಳ ಮಧ್ಯೆ ಘರ್ಷಣೆ ಏರ್ಪಟ್ಟಿದೆ. ಸಮಾಜಘಾತುಕ ಕೃತ್ಯಗಳಲ್ಲಿ ತೊಡಗುವ ವ್ಯಕ್ತಿಗಳ ಫೋನ್ ಕದ್ಧಾಲಿಕೆಗೆ ಗೃಹ ಇಲಾಖೆ ಅನುಮತಿ ನೀಡಬೇಕು. ಆದರೆ, ಇಲಾಖೆ ಅಧಿಕಾರಿಗಳ ಪೋನ್ ಕದ್ದಾಲಿಕೆ ಅನುಮತಿ ನೀಡಿದ್ದು ಯಾರು ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಸಚಿವ ಆರ್.ವಿ.ದೇಶಪಾಂಡೆ, ಆಡಳಿತ ವ್ಯವಸ್ಥೆ ಕುಸಿದಿದೆ ಎಂಬುದು ಸರಿಯಲ್ಲ. ಆಡಳಿತ ವ್ಯವಸ್ಥೆ ಸರಿಯಾಗಿಯೇ ಇದೆ. ಫೋನ್ ಕದ್ದಾಲಿಕೆ ಸಂಬಂಧ ಗೃಹ ಸಚಿವರಿಂದ ಮಾಹಿತಿ ಪಡೆದು ಈ ಬಗ್ಗೆ ಸದನದಲ್ಲಿ ಉತ್ತರ ಕೊಡಿಸಲಾಗುವುದು ಎಂದು ಸ್ಪಷ್ಟಣೆ ನೀಡಿದರು.