ಕೆರೆಗಳ ಅಭಿವೃದ್ಧಿಗೆ 10 ಕೋಟಿ.ರೂ ಅನುದಾನ: ಮೇಯರ್
ಬೆಂಗಳೂರು, ಜೂ.7: ನಗರದ ಪೀಣ್ಯ ಬಳಿಯಿರುವ ಶಿವಪುರ ಮತ್ತು ನೆಲಗದರನಹಳ್ಳಿ ಕೆರೆ ಅಭಿವೃದ್ಧಿಗೆ 10 ಕೋಟಿ.ರೂ ಅನುದಾನ ನೀಡಲಾಗುವುದು ಎಂದು ಬಿಬಿಎಂಪಿ ಮೇಯರ್ ಪದ್ಮಾವತಿ ಘೋಷಣೆ ಮಾಡಿದ್ದಾರೆ.
ಬುಧವಾರ ದಾಸರಹಳ್ಳಿ ವಲಯದ ವಿವಿಧ ಪ್ರದೇಶಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಪುರ ಮತ್ತು ನೆಲಗದರನಹಳ್ಳಿ ಕೆರೆ ಅಭಿವೃದ್ಧಿ ಪಡಿಸಬೇಕು ಎಂದು ಹಲವು ದಿನಗಳಿಂದ ಜನರು ಪಾಲಿಕೆಗೆ ಮನವಿ ಮಾಡಿದ್ದರು. ಈ ಕೆರೆಗಳ ಅಭಿವೃದ್ಧಿಗೆ ನಗರೋತ್ಥಾನ ನಿಧಿಯಿಂದ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪೀಣ್ಯ ಕೈಗಾರಿಕಾ ಪ್ರದೇಶದಿಂದ ಶಿವಕೆರೆ ಏರಿ ರಸ್ತೆ ಅಭಿವೃದ್ಧಿಯ ಜೊತೆ ಕೆರೆಯ ಸುತ್ತಮುತ್ತ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ಕೊಡಿಸಲು ಸರಕಾರದ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು.
ಶಿವಪುರ ಮತ್ತು ನೆಲಗದರನಹಳ್ಳಿ ಕೆರೆಗಳಲ್ಲಿನ ಹೂಳು ತೆಗೆದು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಕೆರೆಯ ಆವರಣದಲ್ಲಿ ಉದ್ಯಾನವನದ ಜೊತೆ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ಶಾಸಕ ಮುನಿರಾಜು, ಬಿಬಿಎಂಪಿ ಸದಸ್ಯೆ ಲಲಿತಾ, ಮಾಜಿ ಸದಸ್ಯ ತಿಮ್ಮನಂಜಯ್ಯ ಸೇರಿದಂತೆ ಇತರರು ಇದ್ದರು.







