ಸಾಹಿತ್ಯದಿಂದ ಮಾನವೀಯತೆ ಬೆಳೆಯಲು ಸಾಧ್ಯ: ದಿನೇಶ್ ಅಮೀನ್ ಮಟ್ಟು
ಉಡುಪಿ, ಜೂ.7: ಸಾಹಿತ್ಯ, ಕಲೆ, ಸಂಗೀತ, ಪುಸ್ತಕ ಓದುವ ಹವ್ಯಾಸ ಇರುವವರು ತಪ್ಪು ದಾರಿಗೆ ಹೋಗುವುದು ತೀರಾ ಕಡಿಮೆ. ಯಾಕೆಂದರೆ ಸಾಹಿತ್ಯವು ಮನುಷ್ಯನನ್ನು ಮಾನವೀಯಗೊಳಿಸುತ್ತದೆ. ಮಕ್ಕಳನ್ನು ಅವರ ಆಸಕ್ತಿಗೆ ಅನುಗುಣ ವಾಗಿ ಬೆಳೆಸಿದರೆ ಮಾತ್ರ ಅವರು ಸರಿಯಾದ ದಿಶೆಯಲ್ಲಿ ಬೆಳೆಯುತ್ತಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಉಡುಪಿ ಬೆಳಕು ಪ್ರಕಾಶನದ ವತಿಯಿಂದ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಬುಧವಾರ ಆಯೋಜಿಸಲಾದ ಪತ್ರಕರ್ತ ಬಾಲಕೃಷ್ಣ ಶಿಬಾರ್ಲ ಅವರ ಪುತ್ರ ಶಾಕ್ಯ ಬಿ.ಕೆ. ಅವರ ಮೊದಲ ಹುಟ್ಟುಹಬ್ಬ ಆಚರಣೆಯಲ್ಲಿ ‘ಚಾಕ್ಯಬಾಬಾ’ ಮಕ್ಕಳ ಕತೆಗಳ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಮಕ್ಕಳನ್ನು ಬೆಳೆಸುವುದು ತುಂಬಾ ಕಷ್ಟ. ಅದನ್ನು ನಾವು ನಮ್ಮ ಹಿರಿಯರಿಂದ ಕಲಿಯಬೇಕೆ ಹೊರತು ಪುಸ್ತಕ ಅಥವಾ ಇಂಟರ್‌ನೆಟ್‌ನಿಂದಲ್ಲ. ಮಕ್ಕಳ ಮೇಲೆ ಅಜ್ಜಿಯಂದಿರ ಪ್ರಭಾವ ಹೆಚ್ಚಾಗಿರುತ್ತದೆ. ಮಕ್ಕಳಲ್ಲಿನ ಕಲ್ಪನಾ ಶಕ್ತಿ ಹಾಗೂ ಸೃಜನಶೀಲತೆ ಬೆಳೆಯಲು ಅಜ್ಜಿಯಂದಿರ ಕಥೆಗಳೇ ಮೂಲ ಪ್ರೇರಣೆಯಾಗಿ ರುತ್ತದೆ ಎಂದರು.
ಇಂದು ಮಕ್ಕಳನ್ನು ಬೆಳೆಸುವ ವಿಧಾನ ಬದಲಾಗಿದೆ. ತಂದೆ ತಾಯಂದಿರಿಗೆ ಪುರುಸೊತ್ತಿಲ್ಲ. ಅಳುವ ಮಕ್ಕಳಿಗೆ ಕಥೆ ಹೇಳಲು ಅಜ್ಜಿಯಂದಿರಿಲ್ಲ. ಹಾಗಾಗಿ ಪೋಷಕರು ಮಕ್ಕಳಿಗೆ ಟಿವಿ ಮತ್ತು ಮೊಬೈಲ್‌ಗಳನ್ನು ತೋರಿಸುತ್ತಿದ್ದಾರೆ. ಇಲ್ಲಿಂದ ಮಕ್ಕಳ ವ್ಯಕ್ತಿತ್ವದ ಅವಸಾನ ಆರಂಭವಾಗುತ್ತದೆ. ಅದರ ಆಚೆಗೆ ಇರುವ ಮಕ್ಕಳ ಬೌದ್ಧಿಕ ಲೋಕ ವಿಸ್ತಾರ ಆಗುವುದೇ ಇಲ್ಲ. ಈ ದೋಷದಿಂದಾಗಿ ಮುಂದಿನ ಜನಾಂಗ ನಾವು ನಿರೀಕ್ಷಿಸುವ ರೀತಿಯಲ್ಲಿ ಪರಿಪೂರ್ಣ ಆಗಿರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಸಂದರ್ಭದಲ್ಲಿ ಎಲ್ಲ ಕಲೆಗಳಲ್ಲಿಯೂ ತೊಡಗಿಸಿಕೊಳ್ಳುವ ಮಕ್ಕಳು ಎಸೆಸೆಲ್ಸಿ ಮುಗಿದ ಕೂಡಲೇ ಅವುಗಳನ್ನು ನಿಲ್ಲಿಸಿ ಕೇವಲ ಸಿಇಟಿಗೆ ತಯಾರಿ ನಡೆಸುತ್ತವೆ. ಇದರಿಂದಾಗಿ ಅಂತಹ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸದ ಅರಿವು ಇರುವುದಿಲ್ಲ. ಈ ಬಗ್ಗೆ ಮೂಲಭೂತ ಅರಿವು ಇಲ್ಲದಿದ್ದರೆ ಮಕ್ಕಳ ವ್ಯಕ್ತಿತ್ವ ದುರ್ಬಲಗೊಳ್ಳುತ್ತದೆ. ಪ್ರಸ್ತುತ ಇದು ನಮ್ಮ ಮುಂದೆ ಇರುವ ದೊಡ್ಡ ಸವಾಲಾಗಿದೆ ಎಂದರು.
ಅಧ್ಯಕ್ಷತೆಯನ್ನು ಪ್ರಗತಿಪರ ಚಿಂತಕ, ಕೃಷಿಕ ಪೌಲ್ ಡಿಸೋಜ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಬಿತಾ ಗುಂಡ್ಮಿ ಮಾತನಾಡಿದರು. ಶುಭಾ ಕೈಪುಂಜಾಲ್ ಉಪಸ್ಥಿ ತರಿದ್ದರು. ಈ ಸಂದರ್ಭದಲ್ಲಿ ಪ್ರವೀಣ್ ಜಿ.ಕೊಡವೂರು ಅವರ ‘ಬಲೆಯೊಳ ಗಿನ ಬದುಕು’ ಛಾಯಾಚಿತ್ರ ಪ್ರದರ್ಶನಕ್ಕೆ ದಿನೇಶ್ ಅಮೀನ್ ಮಟ್ಟು ಚಾಲನೆ ನೀಡಿದರು.
ಬಾಲಕೃಷ್ಣ ಶಿಬಾರ್ಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಜಿ.ಕೊಡವೂರು ವಂದಿಸಿದರು. ಸುಮನಸಾದ ದಾನಂದ ಕಾರ್ಯಕ್ರಮ ನಿರೂಪಿಸಿದರು.