ಅಂಕ ಕೂಡಿಸುವಿಕೆಯಲ್ಲಿನ ಲೋಪದಿಂದ ಅನುತ್ತೀರ್ಣ: ಮರು ಮೌಲ್ಯ ಮಾಪನದಿಂದ ಉತ್ತೀರ್ಣ
ಪುತ್ತೂರು, ಜೂ. 7: ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತೀರ್ಣಗೊಂಡಿದ್ದ ಪುತ್ತೂರಿನ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿ ಹಿಂದಿ ವಿಷಯದಲ್ಲಿ ಅನುತ್ತೀರ್ಣನಾಗಿದ್ದು, ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ತೇರ್ಗಡೆಗೊಂಡಿದ್ದಾನೆ. ಇದರಿಂದಾಗಿ ಓರ್ವ ವಿದ್ಯಾರ್ಥಿ ಅನುತ್ತೀರ್ಣಗೊಂಡು ಶೇ.100 ಫಲಿತಾಂಶದಿಂದ ವಂಚನೆಗೊಂಡಿದ್ದ ಸುಧಾನ ಶಾಲೆಗೆ ಶೇ. 100 ಫಲಿತಾಂಶ ಲಭಿಸಿದೆ.
ಸುದಾನ ವಸತಿಯುತ ಶಾಲೆಯಿಂದ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದ 122 ವಿದ್ಯಾರ್ಥಿಗಳ ಪೈಕಿ 121 ವಿದ್ಯಾರ್ಥಿಗಳು ತೇರ್ಗಡೆಗೊಂಡು ವಿದ್ಯಾಸಂಸ್ಥೆಗೆ ಶೇ.99.18 ಫಲಿತಾಂಶ ಬಂದಿತ್ತು. ಹಿಂದಿ ವಿಷಯದಲ್ಲಿ ಯಧುನಂದನ್ ಎಂಬ ವಿದ್ಯಾರ್ಥಿ 33 ಅಂಕಗಳನ್ನು ಪಡೆದು ಅನುತೀರ್ಣಗೊಂಡಿದ್ದರು. ಆದರೆ ಯದುನಂದನ್ ಮೌಲ್ಯಮಾಪನದ ಲೋಪದಿಂದ ಅನುತ್ತೀರ್ಣಗೊಂಡಿರುವುದನ್ನು ಮನಗಂಡ ಪೋಷಕರು ಹಾಗೂ ವಿದ್ಯಾಸಂಸ್ಥೆಯ ಸಹಕಾರದಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಮರುಮೌಲ್ಯಮಾಪನದಲ್ಲಿ ಆತನಿಗೆ ಹಿಂದಿ ವಿಷಯದಲ್ಲಿ 41 ಅಂಕಗಳನ್ನು ಲಭಿಸಿದ್ದು, ಆತ ಶೇ. ಶೇ.64.32 ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಹಿಂದಿ ವಿಷಯದಲ್ಲಿ ಯಧುನಂದನ್ ಪಡೆದ ಅಂಕಗಳ ಕೂಡಿಸುವಿಕೆ ವಿಚಾರದಲ್ಲಿ ನಡೆದ ಲೋಪವೇ ಆತ ಅನುತೀರ್ಣಗೊಳ್ಳಲು ಕಾರಣ ಎಂಬುವುದು ಮರುಮೌಲ್ಯಮಾಪನದಿಂದ ತಿಳಿದು ಬಂದಿದೆ.
ಈತನ ತೇರ್ಗಡೆ ಫಲಿತಾಂಶದೊಂದಿಗೆ ಈ ವಿದ್ಯಾಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದಂತಾಗಿದೆ. ಸುದಾನ ವಸತಿಯುತ ಶಾಲೆಯಿಂದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ 65 ಮಂದಿ ವಿಶಿಷ್ಟ ಶ್ರೇಣಿ, 55 ಮಂದಿ ಪ್ರಥಮ ಶ್ರೇಣಿ ಮತ್ತು ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಅಭಿಷೇಕ್ ರಾಜ್ಯದಲ್ಲಿ 4ನೇ ಸ್ಥಾನ ಮತ್ತು ಪಲ್ಲವಿ ರಾಜ್ಯದಲ್ಲಿ 5ನೇ ಸ್ಥಾನ ಪಡೆದಿದ್ದಾರೆ ಎಂದು ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ತಿಳಿಸಿದ್ದಾರೆ.







