ಬಾಲಕಿ ಆತ್ಮಹತ್ಯೆ ಯತ್ನ ಪ್ರಕರಣ: ಓರ್ವ ಆರೋಪಿ ಸೆರೆ

ಉಡುಪಿ, ಜೂ.7: ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಶೇಡಿಮನೆ ಎಂಬಲ್ಲಿ ಲೈಂಗಿಕ ಕಿರುಕುಳದಿಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಶೇಡಿಮನೆಯ ವಿನಯ ಶೆಟ್ಟಿ(26) ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳಾದ ಪ್ರಸಾದ್ ಹೆಗ್ಡೆ(30) ಹಾಗೂ ಆತನ ತಮ್ಮ ಪ್ರಶಾಂತ್ ಹೆಗ್ಡೆ(28) ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ವಿನಯ್ ಶೆಟ್ಟಿ ಪ್ರಕರಣದ ಪ್ರಮುಖ ಆರೋಪಿ ಪ್ರಸಾದ್ ಹೆಗ್ಡೆಯ ಗೆಳೆಯ. ವಿನಯ ಶೆಟ್ಟಿ ಬೆಂಗಳೂರಿನಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ಮೊಬೈಲ್ ನೆಟ್‌ವರ್ಕ್‌ನ ಆಧಾರದಲ್ಲಿ ಆತ ಬೆಂಗಳೂರಿನಲ್ಲಿರುವುದನ್ನು ಪೊಲೀಸರು ಖಚಿತ ಪಡಿಸಿಕೊಂಡರು. ಜೂ.5ರಂದು ಬೆಂಗಳೂರಿಗೆ ತೆರಳಿದ ಪೊಲೀಸ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇಂದು ಕುಂದಾಪುರಕ್ಕೆ ಕರೆದುಕೊಂಡು ಬಂದ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Next Story





