ಕೋಟ: ಕಿರುಸೇತುವೆ ಕುಸಿತ; ಸಂಚಾರ ಅಸ್ತವ್ಯಸ್ತ

ಕೋಟ, ಜೂ.7: ಕೋಟ-ಗೋಳಿಯಂಗಡಿ ಜಿಲ್ಲಾ ಮುಖ್ಯ ರಸ್ತೆಯ ಕೋಟ ಮೂರುಕೈಯ ಉಪ್ಲಾಡಿ ಸಮೀಪ ಹಡುವಲ್ ಎಂಬಲ್ಲಿರುವ ಕಿರುಸೇತುವೆ ಇಂದು ಮುಂಜಾನೆ ಕುಸಿದ ಪರಿಣಾಮ ಈ ಮಾರ್ಗದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಸಮುದ್ರ ತಡೆಗೋಡೆ ನಿರ್ಮಾಣಕ್ಕೆ ಭಾರೀ ಗಾತ್ರದ ಕಲ್ಲುಗಳನ್ನು ಹೊತ್ತ ಲಾರಿಗಳ ಓಡಾಟದೊಂದಿಗೆ ಅತಿಭಾರದ ವಾಹನಗಳು ನಿರಂತರವಾಗಿ ಚಲಿಸಿದ್ದರಿಂದ ಈ ಕಿರುಸೇತುವೆ ದುರ್ಬಲಗೊಂಡಿರುವ ವಾಹನ ಚಾಲಕರ ಅರಿವಿಗೆ ಬಂದಿತ್ತು. ಇಂದು ಬೆಳಗ್ಗೆ 8ಗಂಟೆ ಸುಮಾರಿಗೆ ಈ ಮಾರ್ಗದಲ್ಲಿ ಬಂದ ಸ್ಥಳೀಯರೊಬ್ಬರು ಸೇತುವೆಯ ಕಾಂಕ್ರೀಟ್ ಕುಸಿದಿರುವುದನ್ನು ಕಂಡು ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರು.
ತಕ್ಷಣ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳು ಬಂದು ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಮುಂದಾದರು. ಇಡೀ ಸೇತುವೆಯನ್ನು ಕೆಡವಿ ಸಿಮೆಂಟ್‌ನ ದೊಡ್ಡ ಪೈಪುಗಳನ್ನು ಇರಿಸಿ ಅದರ ಮೇಲೆ ಮಣ್ಣು ಹಾಕಿ ಗಟ್ಟಿಗೊಳಿಸಿ ತಾತ್ಕಾಲಿಕವಾಗಿ ಸಣ್ಣ ವಾಹನಗಳು ಚಲಿಸಲು ಅನುವು ಮಾಡಿಕೊಟ್ಟರು. ಬೆಳಗ್ಗೆ 11:00ರಿಂದ ರಾತ್ರಿ 8:00ಗಂಟೆಯವರೆಗೆ ಸೇತುವೆ ದುರಸ್ತಿ ಕಾರ್ಯ ನಡೆದಿದ್ದು, ಈ ಸಂದರ್ಭದಲ್ಲಿ ಕಾವಡಿ-ಕಾರ್ಕಳ ಮಾರ್ಗದಲ್ಲಿ ವಾಹನಗಳು ಸಂಚರಿಸಿದವು.





