ಸಚಿವರು,ಅಧಿಕಾರಿಗಳ ಗೈರು: ಸ್ಪೀಕರ್ ಅಸಮಾಧಾನ
_0.jpg)
ಬೆಂಗಳೂರು, ಜೂ.7: ವಿಧಾನಸಭೆ ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರು, ಅಧಿಕಾರಿಗಳು ಗೈರು ಹಾಜರಾಗಿದ್ದನ್ನು ಕಂಡು ಸ್ಪೀಕರ್ ಕೆ.ಬಿ.ಕೋಳಿವಾಡ, ಆಡಳಿತ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭೋಜನ ವಿರಾಮದ ಬಳಿಕ ಸದನ ಸಮಾವೇಶಗೊಂಡಾಗ ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಯಾವೊಬ್ಬ ಸಚಿವರು ಉಪಸ್ಥಿತರಿಲ್ಲದ್ದನ್ನು ಪ್ರಶ್ನಿಸಿದ ಬಿಜೆಪಿ ಸದಸ್ಯರು, ಪ್ರಮುಖ ವಿಚಾರಗಳನ್ನು ಸರಕಾರದ ಗಮನಕ್ಕೆ ತರಲು ಉದ್ದೇಶಿಸಿದರೆ, ಸಚಿವರು ಹಾಗೂ ಅಧಿಕಾರಿಗಳು ಸದನಕ್ಕೆ ಬರುತ್ತಿಲ್ಲ ಎಂದು ಕಿಡಿಗಾರಿದರು.
ರಾಜ್ಯದಲ್ಲಿನ ಬರಗಾಲ, ರೈತರ ಸಮಸ್ಯೆಗಳು ಸೇರಿದಂತೆ ಅನೇಕ ಮಹತ್ವದ ವಿಚಾರಗಳನ್ನು ನಾವು ಈ ಸದನದಲ್ಲಿ ಚರ್ಚಿಸಬೇಕಿದೆ. ಆದರೆ, ಈ ವಿಷಯಗಳನ್ನು ಕೇಳಬೇಕಾದ ಸಂಬಂಧಪಟ್ಟ ಇಲಾಖೆಯ ಸಚಿವರಾಗಲಿ, ಅಧಿಕಾರಿಗಳಾಗಲಿ ಸದನದಲ್ಲಿ ಉಪಸ್ಥಿತರಿಲ್ಲದಿದ್ದರೆ ಹೇಗೆ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು.
ತಾವು ಸದನವನ್ನು ಮುಂದೂಡಿ. ಸಚಿವರ ಗೈರು ಹಾಜರಿಯಿಂದಾಗಿ ಸದನವನ್ನು ಮುಂದೂಡಲಾಯಿತು ಎಂಬ ಸಂದೇಶ ರಾಜ್ಯದ ಜನತೆಗೆ ಹೋಗಲಿ. ಆಗಲಾದರೂ, ಸಚಿವರು, ಅಧಿಕಾರಿಗಳು ಸದನಕ್ಕೆ ಬರುತ್ತಾರೇನೊ ನೋಡೋಣ ಎಂದು ಬಿಜೆಪಿ ಹಿರಿಯ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ಬಿಜೆಪಿ ಸದಸ್ಯರ ಆಗ್ರಹಕ್ಕೆ ಸ್ಪಂದಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ, ಸದನದಲ್ಲಿ ಉಪಸ್ಥಿತರಿರಬೇಕಾಗಿದ್ದ ಸಚಿವರ ಪಟ್ಟಿಯನ್ನು ಓದಿದರು. ಈ ಪೈಕಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಕೃಷ್ಣಭೈರೇಗೌಡ ಹೊರತುಪಡಿಸಿ, ಸಚಿವರಾದ ಆರ್.ವಿ. ದೇಶಪಾಂಡೆ, ರಮೇಶ್‌ಜಾರಕಿಹೊಳಿ, ಎಚ್.ಕೆ.ಪಾಟೀಲ್, ಬಸವರಾಜರಾಯರಡ್ಡಿ, ತನ್ವೀರ್‌ಸೇಠ್, ವಿನಯ್‌ಕುಲಕರ್ಣಿ, ಡಿ.ಕೆ.ಶಿವಕುಮಾರ್, ಡಾ.ಎಚ್.ಸಿ. ಮಹದೇವಪ್ಪ, ಎಸ್.ಎಸ್.ಮಲ್ಲಿಕಾರ್ಜುನ್, ಎ.ಮಂಜು, ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ಗೈರು ಹಾಜರಾಗಿದ್ದರು.
ಸದನದ ಕಾರ್ಯಕಲಾಪಗಳಿಗೆ ಆಡಳಿತ ಪಕ್ಷ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದು ಮುಖ್ಯ. ನಾಳೆಯಿಂದ ಈ ರೀತಿಯ ಪರಿಸ್ಥಿತಿ ಮರುಕಳಿಸಬಾರದು. ಈ ಮಾತನ್ನು ಬಹಳ ಬೇಸರದಿಂದ ಅನಿವಾರ್ಯವಾಗಿ ಹೇಳುವಂತಾಗಿದೆ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ತಮ್ಮ ಅಸಮಾಧಾನ ಹೊರಹಾಕಿದರು.







