10 ಕೋಟಿ ರೂ.ಗೂ ಅಧಿಕ ವಂಚನೆ: ಎಸ್ಪಿ
ಕಾರ್ಪೊರೇಷನ್ ಬ್ಯಾಂಕ್ ವಂಚನೆ ಪ್ರಕರಣ

ಶಿವಮೊಗ್ಗ, ಜೂ.7: ಶಿವಮೊಗ್ಗ ನಗರದ ಬಿ.ಎಚ್.ರಸ್ತೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಶಾಖೆಯಲ್ಲಿ ನಡೆದಿರುವ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಈ ಸಂಬಂಧ ಸಿಐಡಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಕರೆ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಾವುದೇ ಬ್ಯಾಂಕ್‌ಗಳಲ್ಲಿ 1 ಕೋಟಿ ರೂ. ಮೇಲ್ಪಟ್ಟು ಹಣಕಾಸು ಅವ್ಯವಹಾರ ನಡೆದಿದ್ದರೆ ಅಂತಹ ಪ್ರಕರಣಗಳನ್ನು ಸಿಐಡಿಗೆ ಹಸ್ತಾಂತರಿಸಬೇಕು ಎಂದು ಸರಕಾರದ ಆದೇಶವಿದೆ. ಅದರಂತೆ ಈ ಪ್ರಕರಣ ಹಸ್ತಾಂತರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ವರು ಮಾಹಿತಿ ನೀಡಿದರು.
ಅಧಿಕೃತವಾಗಿ ಸಿಐಡಿ ತನಿಖೆ ಆರಂಭವಾಗುವವರೆಗೂ ಪ್ರಸಕ್ತ ನಡೆಯುತ್ತಿರುವ ಪೊಲೀಸ್ ತನಿಖೆ ಮುಂದುವರಿಯಲಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ನ್ಯಾಯಾಂಗ ವಶದಲ್ಲಿದ್ದ ಇವರನ್ನು ಹೆಚ್ಚಿನ ವಿಚಾರಣೆಗಾಗಿ ಮತ್ತೆ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಹಂತದ ತನಿಖೆಯ ವೇಳೆಯೇ, ಬ್ಯಾಂಕ್‌ನಲ್ಲಿ ಪ್ರಸ್ತುತ 6 ಕೋಟಿ ರೂ.ಗಳಷ್ಟು ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ವಂಚನಾ ಮೊತ್ತ 10 ಕೋಟಿ ರೂ. ದಾಟಲಿದ್ದು, ತನಿಖೆ ನಡೆಯುತ್ತಿದೆ. ಪೂರ್ಣಗೊಂಡ ನಂತರವಷ್ಟೆ ವಂಚನೆಯಾದ ಮೊತ್ತ ಎಷ್ಟೆಂಬುವುದು ತಿಳಿಯಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕಠಿಣಕ್ರಮ: ಅಕ್ರಮ ಮರಳು ದಾಸ್ತಾನು, ಸಾಗಾಣೆ ಹಾಗೂ ಅನುಮತಿಯಿಲ್ಲದೆ ನದಿಪಾತ್ರಗಳಿಂದ ನಿಯಮಬಾಹಿರವಾಗಿ ಮರಳು ತೆಗೆಯುವುದರ ವಿರುದ್ಧ ಪೊಲೀಸ್ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಭಿನವ್ ಖರೆಯವರು ಇದೇ ಸಂದಭರ್ದಲ್ಲಿ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಜಿಲ್ಲೆಯ ವಿವಿಧೆಡೆ ಅಕ್ರಮ ಮರಳು ದಂಧೆ ಯಲ್ಲಿ ತೊಡಗಿದ್ದವರ ಮೇಲೆ ದಿಢೀರ್ ದಾಳಿ ನಡೆಸಿ ಅಪಾರ ಪ್ರಮಾಣದ ಮರಳು ಸೇರಿದಂತೆ ವಾಹನಗಳು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮರಳು ದಂಧೆಯಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆರೋಪಿಗಳು ಪೊಲೀಸ್ ವಶಕ್ಕೆ
ಕಾರ್ಪೊರೇಷನ್ ಬ್ಯಾಂಕ್ ಶಾಖೆಯಲ್ಲಿ ನಡೆದ ಕೋಟ್ಯಂತರ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ವಶದಲ್ಲಿದ್ದ ಐವರು ಆರೋಪಿಗಳನ್ನು ದೊಡ್ಡಪೇಟೆ ಠಾಣೆ ಪೊಲೀಸರು ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಐವರು ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಪೊಲೀಸರ ಕೋರಿಕೆ ಮನ್ನಿಸಿದ ನ್ಯಾಯಾಧೀಶರು ಜೂ. 12 ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ಅಭಯ್‌ಪ್ರಕಾಶ್ ನೇತೃತ್ವದ ಪೊಲೀಸ್ ತಂಡ ಈ ಬೃಹತ್ ವಂಚನಾ ಪ್ರಕರಣದ ತನಿಖೆ ನಡೆಸುತ್ತಿದೆ.







