ಅರಬ್ ರಾಜತಾಂತ್ರಿಕ ಬಿಕ್ಕಟ್ಟು: ಹ್ಯಾಕರ್‌ಗಳ ಸುಳ್ಳು ಸುದ್ದಿ ಒಡಕಿಗೆ ಕಾರಣ ?

ವಾಶಿಂಗ್ಟನ್, ಜೂ. 7: ಸೌದಿ ಅರೇಬಿಯ ಮತ್ತು ಇತರ ಅರಬ್ ದೇಶಗಳು ಕತರ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಲು ರಶ್ಯದ ಹ್ಯಾಕರ್‌ಗಳು ಪ್ರಕಟಿಸಿದ ತಪ್ಪು ಸುದ್ದಿಯೊಂದು ಕಾರಣ ಎಂಬುದಾಗಿ ಅಮೆರಿಕದ ಗುಪ್ತಚರ ಅಧಿಕಾರಿಗಳು ಭಾವಿಸಿದ್ದಾರೆ ಎಂದು ಅಮೆರಿಕದ ಸುದ್ದಿ ಚಾನೆಲ್ ಸಿಎನ್‌ಎನ್ ಮಂಗಳವಾರ ವರದಿ ಮಾಡಿದೆ.
ಹ್ಯಾಕರ್‌ಗಳು ಕತರ್‌ನ ಸರಕಾರಿ ಸುದ್ದಿ ಸಂಸ್ಥೆಯೊಂದರಲ್ಲಿ ಸುಳ್ಳು ಸುದ್ದಿಯೊಂದನ್ನು ಪ್ರಕಟಿಸಿದ ಬಳಿಕ ಸೈಬರ್ ಉಲ್ಲಂಘನೆ ಬಗ್ಗೆ ಪರಿಶೀಲಿಸಲು ಎಫ್‌ಬಿಐ ಪರಿಣತರು ಮೇ ತಿಂಗಳ ಕೊನೆಯಲ್ಲಿ ಕತರ್‌ಗೆ ಪ್ರಯಾಣಿಸಿದ್ದರು ಎಂದು ಅದು ಹೇಳಿದೆ.
ಈ ಸುದ್ದಿಯನ್ನೇ ಆಧಾರವಾಗಿಸಿ, ಕತರ್ ವಿರುದ್ಧ ರಾಜತಾಂತ್ರಿಕ ಮತ್ತು ಆರ್ಥಿಕ ದಿಗ್ಬಂಧನೆಗಳನ್ನು ವಿಧಿಸಲು ಸೌದಿ ಅರೇಬಿಯ ಆಗ ನಿರ್ಧರಿಸಿತು ಎಂದು ಸಿಎನ್‌ಎನ್ ತಿಳಿಸಿದೆ.
ಮೇ 23ರ ಸುದ್ದಿಯು ಕತರ್‌ನ ಆಡಳಿತಗಾರರು ಹೇಳಿದ್ದಾಗಿ ಕೆಲವು ವಿಷಯಗಳನ್ನು ವರದಿ ಮಾಡಿತು. ಅವರ ಮಾತುಗಳು ಅವರು ಇರಾನ್ ಮತ್ತು ಇಸ್ರೇಲ್‌ನೊಂದಿಗೆ ಸ್ನೇಹ ಹೊಂದಿರುವುದನ್ನು ಸೂಚಿಸುತ್ತಿದ್ದವು. ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧಿಕಾರಾವಧಿಯನ್ನು ಪೂರೈಸುತ್ತಾರೆಯೇ ಎಂದು ಪ್ರಶ್ನಿಸುವಂತಿತ್ತು.
ವೆಬ್‌ಸೈಟ್‌ಗೆ ಕನ್ನಹಾಕಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿರುವುದನ್ನು ಎಫ್‌ಬಿಐ ಖಚಿತಪಡಿಸಿದೆ ಎಂದು ಕತಾರ್ ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ರಹಮಾನ್ ಸಿಎನ್‌ಎನ್‌ಗೆ ಹೇಳಿದರು.







