ಸೆಮಿಫೈನಲ್‌ನತ್ತ ಭಾರತದ ಚಿತ್ತ
ಇಂದು ಕೊಹ್ಲಿ-ಮ್ಯಾಥ್ಯೂಸ್ ಪಡೆಯ ಹಣಾಹಣಿ

ಲಂಡನ್,ಜೂ.7: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವಿನ ಖುಷಿಯಲ್ಲಿರುವ ಭಾರತ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಲು ಗುರುವಾರ ಇಲ್ಲಿ ನಡೆಯಲಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.
ಈಗಾಗಲೇ ಪಾಕಿಸ್ತಾನವನ್ನು ಮಣಿಸಿ ಎರಡು ಅಂಕಗಳನ್ನು ಸಂಪಾದಿಸಿರುವ ಭಾರತ ಇನ್ನೊಂದು ಪಂದ್ಯದಲ್ಲಿ ಜಯ ಗಳಿಸಿದರೆ ಸೆಮಿಫೈನಲ್ ಹಾದಿ ಸುಗಮವಾಗುತ್ತದೆ.
ಪಾಕಿಸ್ತಾನದ ವಿರುದ್ಧ ಭಾರತ 124 ರನ್‌ಗಳ ಜಯ ಗಳಿಸಿತ್ತು. ಶ್ರೀಲಂಕಾ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 96 ರನ್‌ಗಳ ಸೋಲು ಅನುಭವಿಸಿತ್ತು. ಇದರಿಂದಾಗಿ ಅದು ಒತ್ತಡಕ್ಕೆ ಸಿಲುಕಿದೆ. ಈ ಪಂದ್ಯದಲ್ಲಿ ಸೋತರೆ ಲಂಕಾದ ಚಾಂಪಿಯನ್ಸ್ ಟ್ರೋಫಿ ಕನಸು ಅರ್ಧದಲ್ಲೇ ಕೊನೆಗೊಳ್ಳುತ್ತದೆ.
ಚಾಂಪಿಯನ್ಸ್ ಟ್ರೋಫಿಯ ಪ್ರತಿಯೊಂದು ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಎರಡು ಪಂದ್ಯಗಳು ರದ್ದಾಗಿವೆ, ಲಂಕಾ ಮತ್ತು ಭಾರತ ತಂಡಗಳ ನಡುವಿನ ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದೆ.
ಶ್ರೀಲಂಕಾ ತಂಡದ ನಾಯಕ ಆಂಜೆಲೊ ಮ್ಯಾಥ್ಯೂಸ್ ಗಾಯದ ಸಮಸ್ಯೆಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಅವರು ಆಡುವುದು ದೃಢಪಟ್ಟಿಲ್ಲ. ಹಂಗಾಮಿ ನಾಯಕ ಉಪುಲ್ ತರಂಗ ನಿಧಾನಗತಿ ಬೌಲಿಂಗ್ ನಡೆಸಿದ ತಪ್ಪಿಗಾಗಿ ಎರಡು ಪಂದ್ಯಗಳಿಂದ ಹೊರಗುಳಿಯುವಂತಾಗಿದೆ.
ಮಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕರ 2015ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ನಿಂದ ನಿರ್ಗಮಿಸಿದ್ದಾರೆ. ಇವರಿಂದ ತೆರವಾಗಿರುವ ಸ್ಥಾನಕ್ಕೆ ಲಂಕೆಗೆ ಸಮರ್ಥ ಆಟಗಾರರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ದಿನೇಶ್ ಚಾಂಡಿಮಾಲ್ ಅಥವಾ ಚಾಮರ ಕಪುಗೆಡೆರ ಅವರಂತಹ ಭರವಸೆಯ ಆಟಗಾರರು ಇದ್ದರೂ, ಅವರಿಂದ ಜಯವಧರ್ನೆ ಮತ್ತು ಸಂಗಕ್ಕರ ಸ್ಥಾನವನ್ನು ತುಂಬಲು ಇನ್ನೂ ಸಮರ್ಥರಾಗಿಲ್ಲ.
ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಇನ್ನ್ನೆರಡು ಪಂದ್ಯಗಳನ್ನು ಆಡಲು ಬಾಕಿ ಇದೆ. ಈ ಕಾರಣದಿಂದಾಗಿ ಭಾರತವು ಲಂಕಾದ ವಿರುದ್ಧ ಗೆಲುವಿನ ಪ್ರಯತ್ನ ನಡೆಸಲಿದೆ. ಕೊನೆಯ ಪಂದ್ಯ ಜೂ.11ರಂದು ದಕ್ಷಿಣ ಆಫ್ರಿಕದೊಂದಿಗೆ ನಡೆಯಲಿದೆ.
ರೋಹಿತ್ ಶರ್ಮ ಪಾಕಿಸ್ತಾನ ವಿರುದ್ಧ ಆಕರ್ಷಕ 91 ರನ್‌ಗಳ ಕೊಡುಗೆ ನೀಡಿದ್ದರು.ಶಿಖರ್ ಧವನ್(68) ಅರ್ಧಶತಕ ದಾಖಲಿಸಿದ್ದರು. ನಾಯಕ ವಿರಾಟ್ ಕೊಹ್ಲಿ 81 ರನ್ ಗಳಿಸಿದ್ದರು. ಯುವರಾಜ್ ಸಿಂಗ್ 53 ರನ್‌ಗಳ ಕೊಡುಗೆ ನೀಡಿದ್ದರು. ಹಾರ್ದಿಕ್ ಪಾಂಡ್ಯ ಅವರು ಧೋನಿ ಬದಲಿಗೆ ಭಡ್ತಿ ಪಡೆದು ನಾಲ್ಕನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ವೇಗದ 20 ರನ್ ದಾಖಲಿಸಿದ್ದರು.ಮೂರು ಸಿಕ್ಸರ್ ಸಿಡಿಸಿದ್ದರು. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಲಂಕಾದ ವಿರುದ್ಧ ಧೋನಿ ಬ್ಯಾಟಿಂಗ್ ನಡೆಸುವ ಸಾಧ್ಯತೆ ಇದೆ.
ಭಾರತದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಭುವನೇಶ್ವರ ಕುಮಾರ್, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ ಇವರು ಕಳೆದ ಪಂದ್ಯದಲ್ಲಿ ಚೆನ್ನಾಗಿ ಆಡಿದ್ದರು. ಆದರೆ ಜಸ್ಪ್ರೀತ್ ಬುಮ್ರಾ ಅವರು ವಿಕೆಟ್ ಪಡೆಯಲಿಲ್ಲ. ವೇಗಿ ಮುಹಮ್ಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ ಲಂಕಾವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಶ್ರೀಲಂಕಾ ತಂಡ ನಾಯಕ ಮ್ಯಾಥ್ಯೂಸ್‌ನ್ನು ಅತಿಯಾಗಿ ಅವಲಂಭಿಸಿದೆ. ವೇಗಿ ಲಸಿತ್ ಮಾಲಿಂಗ ದಾಳಿ ಯಾವ ರೀತಿ ಭಾರತದ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಬಹುದೆಂದು ಕಾದುನೋಡಬೇಕಾಗಿದೆ.
ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ(ವಿಕೆಟ್ ಕೀಪರ್), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್.
ಶ್ರೀಲಂಕಾ : ಆ್ಯಂಜೆಲೊ ಮ್ಯಾಥ್ಯೂಸ್(ನಾಯಕ), ಉಪುಲ್ ತರಂಗ್, ದಿನೇಶ್ ಚಾಂಡಿಮಲ್, ನಿರೋಶನ್ ದಿಕ್ವಾಲ, ಚಾಮರ ಕಪುಗೆಡರ, ಕುಸಾಲ್ ಮೆಂಡಿಸ್, ಕುಸಾಲ್ ಪೆರೆರಾ, ತಿಸ್ಸರಾ ಪೆರೆರಾ, ಸಿಕುಗೆ ಪ್ರಸನ್ನ, ನುವಾನ್ ಪ್ರದೀಪ್, ಸುರಂಗ ಲಕ್ಮಲ್, ಲಕ್ಶನ್ ಸುಂದಕನ್, ಲಸಿತ್ ಮಾಲಿಂಗ, ಅಸೆಲಾ ಗುಣರತ್ನೆ, ನುವಾನ್ ಕುಲಶೇಖರ.
ಪಂದ್ಯದ ಸಮಯ: ಮಧ್ಯಾಹ್ನ 3:00
,,,,,,,,
ಪಿಚ್, ವಾತಾವರಣ: ಮಂಗಳವಾರ ಮಳೆಯ ಕಾರಣದಿಂದಾಗಿ ಲಂಡನ್‌ನಲ್ಲಿ ಭಾರತ ನೆಟ್ ಅಭ್ಯಾಸ ನಡೆಸಲಿಲ್ಲ. ವಾತಾವರಣ ಪಂದ್ಯ ಆರಂಭಗೊಳ್ಳುವ ಹೊತ್ತಿಗೆ ತಿಳಿಯಾಗುವ ಸಾಧ್ಯತೆ ಇದೆ.
ಓವಲ್‌ನ ಪಿಚ್ ಬ್ಯಾಟ್ಸ್‌ಮನ್ ಸ್ನೇಹಿಯಾಗಿದೆ. ಹೀಗಿದ್ದರೂ ಬೌಲರ್‌ಗಳು ಇಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ. ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಮತ್ತು ಭಾರತದ ಬೌಲರ್‌ಗಳು ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ಹೆಡ್‌ಟು ಹೆಡ್
ಆಡಿರುವ ಒಟ್ಟು ಪಂದ್ಯ 149
ಜಯ :ಭಾರತ 83, ಶ್ರೀಲಂಕಾ 54,ಟೈ 1, ಫಲಿತಾಂಶರಹಿತ 11







