ಹೀಗೊಂದು ವಿಭಿನ್ನ ಇಫ್ತಾರ್ ಕೂಟ: ಅಖ್ಲಾಕ್, ಪೆಹ್ಲು ಖಾನ್, ನಜೀಬ್ ಮನೆಯವರೇ ಇಲ್ಲಿ ಮುಖ್ಯ ಅತಿಥಿಗಳು

ಹೊಸದಿಲ್ಲಿ, ಜೂ.7: ರಮಝಾನ್ ತಿಂಗಳಲ್ಲಿ ಸಾಮಾನ್ಯವಾಗಿ ರಾಜಕೀಯ, ಕೆಲ ಸಾಮಾಜಿಕ ಸಂಘಟನೆಗಳು ಆಯೋಜಿಸುವ ಇಫ್ತಾರ್ ಕೂಟಗಳು ಅದ್ಧೂರಿತನದ ಪಾರ್ಟಿಗಳಂತಿರುತ್ತದೆ. ಈ ತಿಂಗಳಿನ ಹಗಲಿನ ವೇಳೆಯಲ್ಲಿ ಸರಳತೆಯಿಂದಿದ್ದು, ರಮಝಾನ್ ಆಚರಣೆ ಮುಗಿಯುತ್ತಿದ್ದಂತೆ ಇಫ್ತಾರ್ ಕೂಟಗಳು ಪ್ರತಿಷ್ಟೆಯ ಪ್ರದರ್ಶನಕ್ಕಷ್ಟೇ ಮೀಸಲಾಗುವಂತಹ ಸನ್ನಿವೇಶಗಳೂ ನಮ್ಮ ಕಣ್ಣ ಮುಂದೆಯೇ ಇವೆ. ಈ ನಡುವೆ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್ ಐಒ) ಆಯೋಜಿಸಿದ್ದ ಇಫ್ತಾರ್ ಕೂಟ ವಿಭಿನ್ನವಾಗಿ ನಿಲ್ಲುತ್ತದೆ. ಕಾರಣ, ಈ ಕೂಟದಲ್ಲಿ ಭಾಗವಹಿಸಿದ್ದು, ರಾಜಕಾರಣಿಗಳೋ ಅಥವಾ ವಿವಿಐಪಿಗಳೋ ಅಲ್ಲ. ಬದಲಾಗಿ, ಗೋರಕ್ಷಕರ ಅಟ್ಟಹಾಸಕ್ಕೆ, ದ್ವೇಷ ರಾಜಕಾರಣಕ್ಕೆ ಬಲಿಯಾದ ಅಮಾಯಕರ ಕುಟುಂಬಸ್ಥರು.
ದಿಲ್ಲಿಯ ಜಾಮಿಯಾ ನಗರದಲ್ಲಿ ಎಸ್ ಐಒ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್, ಗೋರಕ್ಷಕರ ಅಟ್ಟಹಾಸಕ್ಕೆ ಬಲಿಯಾದ ಮುಹಮ್ಮದ್ ಅಖ್ಲಾಕ್, ಪೆಹ್ಲು ಖಾನ್ ಅವರ ಕುಟುಂಬಸ್ಥರು ಭಾಗವಹಿಸಿದ್ದರು.


ಪೆಹ್ಲು ಖಾನ್ ಪುತ್ರ ಹಾಗೂ ಸಂಬಂಧಿ ಅಝ್ಮತ್, ನಾಪತ್ತೆಯಾಗಿರುವ ನಜೀಬ್ ಅಹ್ಮದ್ ರ ತಾಯಿ ಫಾತಿಮಾ ನಫೀಸ್, ಅಖ್ಲಾಕ್ ಅವರ ಕುಟುಂಬಸ್ಥರು ಎಸ್ ಐಒ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
“ದ್ವೇಷ ರಾಜಕಾರಣಕ್ಕೆ ಬಲಿಯಾದವರ ಅಮಾಯಕರ ಕುಟುಂಬಸ್ಥರೊಂದಿಗೆ ರಮಝಾನ್ ನ ಸಂತೋಷವನ್ನು ಹಂಚಿಕೊಳ್ಳಲು ನಾವು ಇಚ್ಛಿಸಿದ್ದೆವು. ಅವರೊಂದಿಗೆ ನಾವೂ ಜೊತೆಗಿದ್ದೇವೆ ಎನ್ನುವುದನ್ನು ಹೇಳಲು ಬಯಸಿದ್ದೇವೆ” ಎಂದು ಎಸ್ ಐಒ ಸದಸ್ಯರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.


ಸರಕಾರಿ ಸ್ವಾಮ್ಯದ ಮಾರುಕಟ್ಟೆಯಿಂದ ಹಸುಗಳು ಮತ್ತು ಕರುಗಳನ್ನು ವಾಹನದಲ್ಲಿದ್ದ ತರುತ್ತಿದ್ದ ಪೆಹ್ಲು ಖಾನ್ ರನ್ನು ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಅಡ್ಡಗಟ್ಟಿದ್ದ ಗೋರಕ್ಷಕ ದುಷ್ಕರ್ಮಿಗಳು ವಯೋವೃದ್ಧರೂ ಎಂದು ನೋಡದೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಂದು ಹಾಕಿದ್ದರು. ಈ ಘಟನೆಯಿಂದ ಗೋರಕ್ಷಕರ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದ ನಂತರ ನಿಗೂಢವಾಗಿ ನಾಪತ್ತೆಯಾಗಿದ್ದರು. 2016ರ ಅಕ್ಟೋಬರ್ 15ರಂದು ನಾಪತ್ತೆಯಾಗಿದ್ದ ನಜೀಬ್ ರ ಬಗ್ಗೆ ಪೊಲೀಸರಿಗೆ ಇನ್ನೂ ಮಾಹಿತಿ ಕಲೆಹಾಕಲು, ನಾಪತ್ತೆ ಪ್ರಕರಣದ ಹಿಂದಿನ ದುಷ್ಕರ್ಮಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ.
ಗೋಮಾಂಸ ಸೇವಿಸಿದ್ದಾರೆ ಹಾಗೂ ಮನೆಯಲ್ಲಿ ಗೋಮಾಂಸವಿದೆ ಎನ್ನುವ ಆರೋಪದಲ್ಲಿ ಉತ್ತರ ಪ್ರದೇಶದ ದಾದ್ರಿಯಲ್ಲಿ ಅಹ್ಮದ್ ಅಖ್ಲಾಕ್ ರನ್ನು ಗೋರಕ್ಷಕ ದುಷ್ಕರ್ಮಿಗಳು ಕೊಲೆಗೈದಿದ್ದರು. ಅಖ್ಲಾಕ್ ರ ಪುತ್ರನ ಮೇಲೂ ಗೋರಕ್ಷಕರು ದಾಳಿ ನಡೆಸಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದ.











