ಭಾರತದ ಕೋಚ್ ಹುದ್ದೆಗೆ ಮರು ಅರ್ಜಿ ಸಲ್ಲಿಸಿದ ಕುಂಬ್ಳೆ

ಹೊಸದಿಲ್ಲಿ, ಜೂ.8: ಭಾರತದ ಪ್ರಮುಖ ಕೋಚ್ ಹುದ್ದೆಗೆ ಅಧಿಕೃತವಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಿರುವ ಅನಿಲ್ ಕುಂಬ್ಳೆ ಎರಡನೆ ಅವಧಿಗೆ ಕೋಚ್ ಆಗಿ ಮುಂದುವರಿಯಲು ಒಲವು ತೋರಿದ್ದಾರೆ.
ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ಹಾಲಿ ಕೋಚ್ ಕುಂಬ್ಳೆಗೆ ‘ನೇರ ಪ್ರವೇಶ’ ನೀಡಿರುವ ಬಿಸಿಸಿಐ ಅಧಿಕೃತವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದಾಗ್ಯೂ ಕುಂಬ್ಳೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಭಾರತದ ಕೋಚ್ ಹುದ್ದೆಗೆ ಸ್ಪರ್ಧೆಯಲ್ಲಿರುವ ಅಂತಿಮ 6ರ ಪಟ್ಟಿಗೆ ಕುಂಬ್ಳೆ ಸೇರ್ಪಡೆಯಾಗಿದ್ದಾರೆ. ಕೋಚ್ ಹುದ್ದೆಗೆ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ಲಾಲ್‌ಚಂದ್ ರಾಜ್‌ಪೂತ್ ಹಾಗೂ ಕನ್ನಡಿಗ ದೊಡ್ಡ ಗಣೇಶ್ ಅರ್ಜಿ ಸಲ್ಲಿಸಿದ್ದಾರೆ.
ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಎಲ್ಲ ಕೋಚ್ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ, ಸಂದರ್ಶನಕ್ಕೆ ಅರ್ಹರೇ ಎಂದು ಖಚಿತಪಡಿಸಲಿದೆ.
ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಕ್ರೆಗ್ ಮೆಕ್‌ಡೆರ್ಮಾಟ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕ್ರೆಗ್ ಅರ್ಜಿ ಸಲ್ಲಿಸುವಾಗ ಅಂತಿಮ ಗಡುವು(ಮೇ 31) ಮುಗಿದಿತ್ತು.
ಸಿಎಸಿ ಈವಾರ ಸಭೆ ಸೇರಿ ಕೋಚ್ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಸಂದರ್ಶನದ ದಿನವನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಜೂ.18 ರಂದು ಚಾಂಪಿಯನ್ಸ್ ಟ್ರೋಫಿ ಕೊನೆಗೊಳ್ಳುವ ಮೊದಲು ಕೋಚ್ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬಿಸಿಸಿಐ ಬಯಸಿದೆ. ಚಾಂಪಿಯನ್ಸ್ ಟ್ರೋಫಿ ಕೊನೆಗೊಂಡ ತಕ್ಷಣ ಭಾರತ ಸೀಮಿತ ಓವರ್ ಸರಣಿಯನ್ನಾಡಲು ಕೆರಿಬಿಯನ್‌ಗೆ ತೆರಳಲಿದೆ.
ಚಾಂಪಿಯನ್ಸ್ ಟ್ರೋಫಿಯೊಂದಿಗೆ ಕುಂಬ್ಳೆ ಅವರ ಒಂದು ವರ್ಷ ಅವಧಿ ಕೊನೆಗೊಳ್ಳಲಿದೆ. ಕುಂಬ್ಳೆಯನ್ನು ಹುದ್ದೆಯಲ್ಲಿ ಮುಂದುವರಿಸಲು ಇಚ್ಛಿಸದ ಬಿಸಿಸಿಐ ಆಸಕ್ತ ಅಭ್ಯರ್ಥಿಗಳು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಜಾಹೀರಾತು ನೀಡಿತ್ತು







