ಧ್ಯಾನ್‌ಚಂದ್‌ಗೆ ‘ಭಾರತ ರತ್ನ' : ಕ್ರೀಡಾ ಸಚಿವಾಲಯದಿಂದ ಪಿಎಂಒಗೆ ಪತ್ರ

ಹೊಸದಿಲ್ಲಿ, ಜೂ.7: ಹಾಕಿ ದಂತಕತೆ ಧ್ಯಾನ್‌ಚಂದ್‌ಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕೆಂದು ಕೋರಿ ಕ್ರೀಡಾ ಸಚಿವಾಲಯ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದೆ. ಈ ಮೂಲಕ ದೇಶದ ಉನ್ನತ ನಾಗರಿಕ ಗೌರವವನ್ನು ಹಾಕಿ ದಂತಕತೆ ಧ್ಯಾನ್‌ಚಂದ್‌ಗೆ ನೀಡಬೇಕೆಂಬ ಕೂಗು ಮತ್ತೆ ಕೇಳಿಬರಲಾರಂಭಿಸಿದೆ.
‘‘ಧ್ಯಾನ್‌ಚಂದ್‌ಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿ ನಾವು ಪ್ರಧಾನಮಂತ್ರಿಗೆ ಪತ್ರ ಬರೆದಿರುವುದು ನಿಜ. ಈ ಪ್ರಶಸ್ತಿ ನೀಡುವ ಮೂಲಕ ದೇಶಕ್ಕೆ ಅವರು ನೀಡಿರುವ ಅಮೂಲ್ಯ ಕೊಡುಗೆಗೆ ಗೌರವ ನೀಡಬೇಕಾಗಿದೆ’ ಎಂದು ಕ್ರೀಡಾ ಸಚಿವ ವಿಜಯ್ ಗೊಯೆಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಭಾರತ ಹಾಕಿ ತಂಡ 1928, 1932 ಹಾಗೂ 1936ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಲು ನೆರವಾಗಿದ್ದ ಧ್ಯಾನ್‌ಚಂದ್‌ಗೆ ‘ಭಾರತ ರತ್ನ’ ನೀಡಿ ಗೌರವಿಸಬೇಕೆಂದು ಒತ್ತಾಯಿಸುತ್ತಿರುವುದು ಇದೇ ಮೊದಲಲ್ಲ. 2013ರಲ್ಲಿ ಯುಪಿಎ ನೇತೃತ್ವದ ಕೇಂದ್ರ ಸರಕಾರವಿದ್ದಾಗಲೂ ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ಗೆ ಪ್ರಶಸ್ತಿ ನೀಡುವ ಬಗ್ಗೆ ಚಿಂತಿಸಲಾಗಿತ್ತು. ಆದರೆ, ಅದೇ ವರ್ಷ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದರು. ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಕೆಲವೇ ಗಂಟೆಗಳ ಬಳಿಕ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲು ಕೇಂದ್ರ ಸರಕಾರ ನಿರ್ಧರಿಸಿತ್ತು.
1979ರಲ್ಲಿ ನಿಧನರಾಗಿರುವ ಧ್ಯಾನ್‌ಚಂದ್‌ಗೆ ತೆಂಡುಲ್ಕರ್‌ಗಿಂತ ಮೊದಲೇ ಭಾರತ ರತ್ನ ಪ್ರಶಸ್ತಿ ನೀಡಬೇಕಾಗಿತ್ತೇ? ಎಂದು ಗೊಯೆಲ್‌ರಲ್ಲಿ ಕೇಳಿದಾಗ,‘‘ ‘‘ಧ್ಯಾನ್‌ಚಂದ್ ಸಾಧನೆಯನ್ನು ಯಾವ ಪ್ರಶಸ್ತಿಯಿಂದಲೂ ಅಳೆಯಲು ಸಾಧ್ಯವಿಲ್ಲ. ಅವರು ಎಲ್ಲದಕ್ಕಿಂತಲೂ ಮಿಗಿಲಾದವರು. ಭಾರತ ರತ್ನ ಪ್ರಶಸ್ತಿಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಅವರು ಭಾರತವು ಕ್ರೀಡಾ ಶಕ್ತಿಯಾಗಿ ಹೊರಹೊಮ್ಮಬೇಕೆಂದು ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ’’ ಎಂದರು.
ಧ್ಯಾನ್‌ಚಂದ್ ಪುತ್ರ ಅಶೋಕ್ ಕುಮಾರ್ ಹಾಗೂ ಇತರ ಮಾಜಿ ಆಟಗಾರರು ಹಲವು ವರ್ಷಗಳಿಂದ ಹಾಕಿ ಹೀರೊ ಧ್ಯಾನ್‌ಚಂದ್‌ಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಪ್ರತಿಷ್ಠಿತ ಪ್ರಶಸ್ತಿಗೆ ಧ್ಯಾನ್‌ಚಂದ್‌ರನ್ನು ಪದೇ ಪದೇ ನಿರ್ಲಕ್ಷಿಸುತ್ತಿರುವುದನ್ನು ಖಂಡಿಸಿ ಕಳೆದ ವರ್ಷ ಮಾಜಿ ಹಾಕಿ ನಾಯಕರಾದ ಅಶೋಕ್ ಕುಮಾರ್, ಅಜಿತ್ ಪಾಲ್ ಸಿಂಗ್, ಝಾಫರ್ ಇಕ್ಬಾಲ್, ದಿಲಿಪ್ ಟಿರ್ಕಿ ಸಹಿತ ನೂರಾರು ಮಾಜಿ ಆಟಗಾರರು ಪ್ರತಿಭಟನೆ ನಡೆಸಿದ್ದರು.
ಧ್ಯಾನ್‌ಚಂದ್‌ಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು 82 ಮಂದಿ ಸಂಸತ್ ಸದಸ್ಯರುಗಳು 2011ರಲ್ಲಿ ಸರಕಾರವನ್ನು ಒತ್ತಾಯಿಸಿದ್ದರು. ಆದರೆ, ಸಂಸದರ ಒತ್ತಾಯಕ್ಕೆ ಕೇಂದ್ರ ಸರಕಾರ ಸ್ಪಂದಿಸಿರಲಿಲ್ಲ.
ಧ್ಯಾನ್‌ಚಂದ್ ಜನ್ಮದಿನ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತಿದ್ದು, ಆ ದಿನದಂದು ರಾಷ್ಟ್ರಪತಿಗಳು ದೇಶದ ಅಥ್ಲೀಟ್‌ಗಳಿಗೆ ಪ್ರಶಸ್ತಿಗಳನ್ನು ನೀಡುತ್ತಾರೆ.







