ಟ್ರಿಮ್ ಆಗಿದ್ದ ಟ್ರೆಮ್ಲೆಟ್ ಈಗ ಬಾಡಿ ಬಿಲ್ಡರ್!

ಹೊಸದಿಲ್ಲಿ, ಜೂ.7: ಇಂಗ್ಲೆಂಡ್‌ನ ಆರಡಿ ಏಳು ಇಂಚು ಎತ್ತರದ ಮಾಜಿ ವೇಗದ ಬೌಲರ್ ಕ್ರಿಸ್ ಟ್ರೆಮ್ಲೆಟ್ ಇದೀಗ ದೈಹಿಕವಾಗಿ ಸಂಪೂರ್ಣ ಬದಲಾಗಿದ್ದು, ತನ್ನ ಬದಲಾದ ಮೈಕಟ್ಟಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
35ರ ಹರೆಯದ ಟ್ರೆಮ್ಲೆಟ್ ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಫೋಟೊದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘‘ಒಂದೂವರೆ ವರ್ಷಗಳ ಹಿಂದೆ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ನನ್ನ ದೇಹತೂಕದಲ್ಲಿ 20 ಕಿಲೋ ಹೆಚ್ಚಾಗಿದೆ. ನಾನು ನಿಧಾನವಾಗಿ ನನ್ನ ದೇಹದ ಆಕಾರವನ್ನು ಬದಲಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿದೆ. ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ನಾನು ಸಪೂರವಾಗಿದ್ದೆ. ನಿರ್ದಿಷ್ಟ ಆಕಾರವನ್ನು ಕಾಯ್ದುಕೊಂಡಿದ್ದೆ. ನಾನೀಗ ಬಾಡಿ ಬಿಲ್ಡರ್ ಆಗಿಲ್ಲ. ವೇಟ್ ಟ್ರೈನಿಂಗ್‌ನ ಮೂಲಕ ಫಿಟ್ ಆಗಿರಲು ಪ್ರಯತ್ನಿಸುತ್ತಿರುವೆ’’ ಎಂದು ಇಂಗ್ಲೆಂಡ್‌ನ ಪರ 12 ಟೆಸ್ಟ್, 15 ಏಕದಿನ ಪಂದ್ಯಗಳನ್ನು ಆಡಿದ್ದ ಟ್ರೆಮ್ಲೆಟ್ ತಿಳಿಸಿದ್ದಾರೆ. ಸತತವಾಗಿ ಕಾಡುತ್ತಿದ್ದ ಗಾಯದ ಸಮಸ್ಯೆಯ ಕಾರಣದಿಂದ ಟ್ರೆಮ್ಲೆಟ್ 2015ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. 2010-11ರ ಆಸ್ಟ್ರೇಲಿಯ ಪ್ರವಾಸದಲ್ಲಿ ಇಂಗ್ಲೆಂಡ್ ತಂಡ ಪ್ರತಿಷ್ಠಿತ ಆ್ಯಶಸ್ ಕಪ್‌ನ್ನು ತನ್ನಲ್ಲೇ ಉಳಿಸಿಕೊಳ್ಳಲು ನೆರವಾಗಿದ್ದರು. ಆ್ಯಶಸ್ ಸರಣಿಯ 3 ಪಂದ್ಯಗಳಲ್ಲಿ ಒಟ್ಟು 17 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದರು. 15 ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದ ಟ್ರೆಮ್ಲೆಟ್ 459 ವಿಕೆಟ್‌ಗಳನ್ನು ಕಬಳಿಸಿದ್ದರು.





