ಎಸ್‌ಐಟಿ ತನಿಖೆಯಿಂದ ನ್ಯಾಯ ಸಿಗುವ ನಂಬಿಕೆ ಇಲ್ಲ: ತಿವಾರಿ ಕುಟುಂಬ

ಬೆಂಗಳೂರು, ಜೂ.7: ಐಎಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಕುರಿತು ಉತ್ತರಪ್ರದೇಶ ವಿಶೇಷ ತನಿಖಾ ದಳದ(ಎಸ್‌ಐಟಿ) ತನಿಖೆಯಿಂದ ನ್ಯಾಯ ಸಿಗುವ ನಂಬಿಕೆ ಇಲ್ಲ. ಹೀಗಾಗಿ, ಸಿಬಿಐ ತನಿಖೆ ನಡೆಸಬೇಕೆಂದು ಅನುರಾಗ್ ತಿವಾರಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ನಗರದ ನ್ಯಾಯಾಂಗ ಬಡಾವಣೆಯಲ್ಲಿರುವ ಅನುರಾಗ್ ತಿವಾರಿ ಸ್ನೇಹಿತ ವೆಂಕಟೇಶ್ ಮನೆಯಲ್ಲಿ ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ತಿವಾರಿ ಅವರ ತಂದೆ ಬಿ.ಎನ್.ತಿವಾರಿ ಮತ್ತು ಸುಶೀಲಾ ಅವರು, ಮಗನ ಸಾವಿಗೆ ಕುರಿತು ಎಸ್‌ಐಟಿ ಅಧಿಕಾರಿಗಳು ನಮ್ಮಿಂದ ಯಾವುದೇ ಮಾಹಿತಿ ಪಡೆದಿಲ್ಲ. ಅಲ್ಲದೆ, ಇಲಾಖೆಯ ಭ್ರಷ್ಟಾಚಾರವನ್ನು ಹೊರಗೆಳೆಯಲು ಮುಂದಾಗಿದ್ದ ಕಾರಣ ಅವರ ಕೊಲೆ ನಡೆದಿದೆ ಎಂದು ಆರೋಪಿಸಿದರು.
ಅಧಿಕಾರಿ ಮೇಲೆ ಸಂಶಯ: ಪುತ್ರನ ಸಾವಿಗೆ ಸಂಬಂಧಪಟ್ಟಂತೆ ಐಎಎಸ್ ಅಧಿಕಾರಿ ನಾರಾಯಣ ಪ್ರಭು ಅವರ ಮೇಲೆ ಅನುಮಾನ ಇದೆ ಎಂದ ಅವರು, ಲಖನೌದಲ್ಲಿ ತಿವಾರಿ ಅವರ ಜತೆಯಿದ್ದ ನಾಲ್ವರು ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಇರುತ್ತದೆ. ಅದರ ಬಗ್ಗೆಯೂ ಎಸ್‌ಐಟಿ ಅಧಿಕಾರಿಗಳು ಇದುವರೆಗೂ ಸೂಕ್ತ ತನಿಖೆ ನಡೆಸಿಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯದ ಆಹಾರ ಇಲಾಖೆಯ ಆಯುಕ್ತರಾದ ಬಳಿಕ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ನಮ್ಮ ಮಗ ಮಾಹಿತಿ ಕಲೆ ಹಾಕಿದ್ದರು. ಉತ್ತರ ಪ್ರದೇಶದ ಮನೆಗೆ ಬಂದಿದ್ದ ವೇಳೆ ತಡರಾತ್ರಿಯಾದರೂ ಬೆಂಗಳೂರಿನಿಂದ ಕರೆ ಬರುತ್ತಿತ್ತು. ಅಲ್ಲದೆ, ಭ್ರಷ್ಟಾಚಾರ ಎಸಗಿದವರು ಮಾತ್ರ ನನ್ನ ಮಗನನ್ನು ಕೊಲೆ ಮಾಡಲು ಸಾಧ್ಯ ಎಂದು ತಾಯಿ ಸುಶೀಲಾ ಹೇಳಿ ಕಣ್ಣೀರಿಟ್ಟರು.
ಅನುರಾಗ್ ಮತ್ತು ಆತನ ಪತ್ನಿಯ ಸಂಬಂಧ ಸರಿಯಿಲ್ಲ. ಈ ಕಾರಣಕ್ಕಾಗಿ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಎರಡು ವರ್ಷಗಳಿಂದ ವಿಚ್ಛೇಧನ ಅರ್ಜಿ ವಿಚಾರಣೆ ನಡೆಯುತ್ತಿದೆ ಎಂದ ಅವರು, ರಾಜ್ಯ ಸರಕಾರ ನಾಲ್ಕು ತಿಂಗಳಿನಿಂದ ವೇತನ ನೀಡಿಲ್ಲ. ಯಾವ ಕಾರಣಕ್ಕೆ ನೀಡಿಲ್ಲ ಎಂಬುದು ಇನ್ನೂ ಗೊತ್ತಿಲ್ಲ. ಆದರೆ, ಆತ ಸಾವನ್ನಪ್ಪಿದ ಬಳಿಕ ಬಾಕಿ ವೇತನವನ್ನು ನೀಡಲಾಗಿದೆ ಎಂದರು.
‘ನಾವು ಬೆಂಗಳೂರಿಗೆ ಬಂದಿರುವ ವಿಚಾರ ರಾಜ್ಯ ಸರಕಾರಕ್ಕೆ ತಿಳಿದಿದ್ದರೂ ಯಾರೊಬ್ಬರೂ ನಮ್ಮನ್ನು ಸಂಪರ್ಕಿಸಿಲ್ಲ’-ಅನುರಾಗ್ ತಿವಾರಿ ಕುಟುಂಬಸ್ಥರು







