ಅಭಿವೃದ್ಧಿ ಕಾಮಗಾರಿ ತಾತ್ಕಾಲಿಕ ಸ್ಥಗಿತ
ಎರ್ಮಾಳು ರುದ್ರಭೂಮಿ ವಿವಾದ
ಪಡುಬಿದ್ರೆ, ಜೂ.7: ಎರ್ಮಾಳು ಬಡಾದಲ್ಲಿರುವ ಸರಕಾರಿ ಜಮೀನಿನಲ್ಲಿರುವ ಸಾರ್ವಜನಿಕ ರುದ್ರಭೂಮಿ ಅಭಿವೃದ್ಧಿ ಕಾಮಗಾರಿಯನ್ನು ಮೊಗವೀರ ಸಮಾಜದ ವಿರೋಧದ ಬಳಿಕ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ಬಡಾ ಗ್ರಾಮದ ಎರ್ಮಾಳು ಬಡಾ ಕರ್ಕೇರ ಮೂಲಸ್ಥಾನದ ಬಳಿಯ 1.56 ಎಕರೆ ಸರಕಾರಿ ಜಮೀನಿನಲ್ಲಿ 50 ಸೆಂಟ್ಸ್ ಜಾಗವನ್ನು ಸಾರ್ವಜನಿಕ ಹಿಂದೂ ರುಧ್ರಭೂಮಿ ನಿರ್ಮಾಣಕ್ಕೆ ಗೊತ್ತುಪಡಿಸಿದ ಜಾಗದಲ್ಲಿ ದಲಿತ ಸಂಘಟನೆಗಳ ನೆರವಿನಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಇತ್ತೀಚೆಗೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಕಾಮಗಾರಿ ಸ್ಥಗಿತಗೊಳಿಸಲು ಒತ್ತಾಯಿಸಿ ಬುಧವಾರ ಕಾಮಗಾರಿ ಸ್ಥಳದಲ್ಲಿ ಮೊಗವೀರ ಸಮಾಜದವರು ಜಮಾಯಿಸಿದರು.
ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಮಹೇಶ್ಚಂದ್ರ, ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೆ ಪಟ್ಟುಬಿಡದ ಪ್ರತಿಭಟನಾಕಾರರು ಸ್ಮಶಾನಕ್ಕೆಂದು ಗುರುತಿಸಿರುವ ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಕಟ್ಟಿಂಗೇರಿಯಲ್ಲಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಶಿಲ್ಪಾನಾಗ್, ಕಟ್ಟಿಂಗೇರಿ ಪ್ರದೇಶದಲ್ಲಿ ಕೆರೆ ಇರುವುದರಿಂದ ಸ್ಮಶಾನ ಮಾಡಲು ಸಾಧ್ಯವಿಲ್ಲ. ಅದರ ಬದಲು 5 ಎಕರೆ ಜಾಗವನ್ನು ಶೀಘ್ರ ಗುರುತಿಸಿ ಕಾಮಗಾರಿ ಆರಂಭಿಸಲಾಗುವುದು. ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾರಣ ಸಮಸ್ಯೆ ಆಗುತ್ತಿರುವುದರಿಂದ ಹಾಗೂ ಜನಸಂಖ್ಯೆಯ ಆಧಾರದಲ್ಲಿ ಇಲ್ಲೂ ಸ್ಮಶಾನ ನಿರ್ಮಿಸಲಾಗುವುದು ಎಂದರು.
ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಕರ್ಕೇರ, ಎರ್ಮಾಳ್ ಬಡಾ ಮೊಗವೀರ ಸಭಾದ ಭರತ್, ಮುಖಂಡರಾದ ಕಾಂತಪ್ಪಕರ್ಕೇರ, ಗುರುವಪ್ಪಕೋಟ್ಯಾನ್, ಲಕ್ಷ್ಮಣ ಅಮೀನ್, ಶರತ್ ಗುಡ್ಡೆಕೊಪ್ಲ, ಮನಪಾ ಸದಸ್ಯ ಕುಮಾರ ಮೆಂಡನ್, ಲೀಲಾಧರ ತಣ್ಣೀರುಬಾವಿ, ಸೇವಂತಿ ಪಡುಬಿದ್ರೆ ಉಪಸ್ಥಿತರಿದ್ದರು.
*ಏನು ವಿವಾದ: ಬಡಾ ಗ್ರಾಮದ ಎರ್ಮಾಳು ಬಡಾ ಕರ್ಕೇರ ಮೂಲಸ್ಥಾನದ ಬಳಿಯ 1.56 ಎಕರೆ ಸರಕಾರಿ ಜಮೀನಿ ನಲ್ಲಿ 50 ಸೆಂಟ್ಸ್ ಜಾಗವನ್ನು ಸಾರ್ವಜನಿಕ ಹಿಂದೂ ರುಧ್ರಭೂಮಿ ನಿರ್ಮಾಣಕ್ಕೆ ಗೊತ್ತುಪಡಿಸಿ 2016ರ ಎಪ್ರಿಲ್ 4ರಂದು ಉಡುಪಿಯ ಅಂದಿನ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಆದೇಶ ಹೊರಡಿಸಿದ್ದರು. ಆದರೆ ಇಲ್ಲಿ ಸ್ಮಶಾನ ನಿರ್ಮಾಣಕ್ಕೆ ಸ್ಥಳೀಯ ಮೊಗವೀರ ಸಭಾದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಏಕೆಂದರೆ ಈ ಹಿಂದೆ ಶಾಸಕರಾಗಿದ್ದ ಲಾಲಾಜಿ ಮೆಂಡನ್ ಅವಧಿಯಲ್ಲಿ ಕಟ್ಟಿಂಗೇರಿ ಕೆರೆಯನ್ನು ಸ್ಮಶಾನಕ್ಕೆ ಗುರುತಿಸಲಾಗಿತ್ತು. ಆದರೆ ಅಲ್ಲಿ ಕೆರೆ ಇರುವುದರಿಂದ ಸ್ಥಳೀಯರ ವಿರೋಧದ ಹಿನ್ನೆಲೆ ಈ ಪ್ರಸ್ತಾಪವನ್ನು ಜಿಲ್ಲಾಡಳಿತ ಕೈಬಿಟ್ಟಿತ್ತು. ಆದರೆ, ಇದೀಗ ಸ್ಥಳೀಯ ಮೊಗವೀರರು ಕಟ್ಟಿಂಗೇರಿಯಲ್ಲೇ ಸ್ಮಶಾನ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮೊಗವೀರರ ದಮನ: ಆರೋಪ
ಎರ್ಮಾಳು ಬಡಾದಲ್ಲಿ ಸಾರ್ವಜನಿಕ ರುಧ್ರಭೂಮಿ ನಿರ್ಮಿಸುವ ಮೂಲಕ ಜಿಲ್ಲಾಡಳಿತ ಹಾಗೂ ಸರಕಾರ ಮೊಗವೀರರನ್ನು ದಮನಿಸುವ ನೀತಿ ಅನುಸರಿಸುತ್ತಿದೆ ಎಂದು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಎಚ್.ಗಂಗಾಧರ್ ಕರ್ಕೇರ ಆರೋಪಿಸಿದ್ದಾರೆ.
ಉಚ್ಚಿಲ ಮಹಾಲಕ್ಷ್ಮೀ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರ್ಮಾಳು ಬಡಾ ಹಾಗೂ ಕಟ್ಟಿಂಗೇರಿಯಲ್ಲಿ ರುಧ್ರಭೂಮಿಗೆ ಮೀಸಲಿ ರಿಸಿದ ಸ್ಥಳದಲ್ಲಿ ಏಕಕಾಲಕ್ಕೆ ಕಾಮಗಾರಿ ನಡೆಸಬೇಕು. ಇಲ್ಲವಾದಲ್ಲಿ ಕರಾವಳಿಯ ಮೂರು ಜಿಲ್ಲೆಗಳ 156 ಮೊಗವೀರ ಗ್ರಾಮಸಭೆಗಳ ನೇತೃತ್ವದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.







