ಅಬುದಾಭಿಯಲ್ಲಿ ನೂರಾರು ಕೋಟಿ ರೂ. ಅಕ್ರಮ ಆಸ್ತಿ ಆರೋಪ: ಕೆ.ಎಸ್.ಈಶ್ವರಪ್ಪ ವಿರುದ್ಧ 'ಇಡಿ'ಗೆ ದೂರು

ಬೆಂಗಳೂರು, ಜೂ.8: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರು ಅಬುದಾಭಿ ಸೇರಿದಂತೆ ವಿವಿಧ ಕಡೆ ನೂರಾರು ಕೋಟಿ ರೂ. ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗ ಮೂಲದ ವಕೀಲರೊಬ್ಬರು ಜಾರಿ ನಿರ್ದೇಶನಾಲಯಕ್ಕೆ (ಇಡಿ) ದೂರು ನೀಡಿದ್ದಾರೆ.
ಗುರುವಾರ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಯ ಜಂಟಿ ನಿರ್ದೇಶಕ ರಮಣ್ ಗುಪ್ತಾ ಅವರಿಗೆ ಶಿವಮೊಗ್ಗದ ವಕೀಲ ವಿನೋದ್ ಎಂಬುವರು ದೂರು ನೀಡಿದ್ದು, ಕರ್ನಾಟಕ ಸೇರಿ ವಿವಿಧ ರಾಜ್ಯಗಳು ಹಾಗೂ ವಿದೇಶದಲ್ಲೂ ಈಶ್ವರಪ್ಪ ನೂರಾರು ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಮನಿ ಲಾಂಡರಿಂಗ್ ಕಾಯ್ದೆಯಡಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ವಿನೋದ್, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿಯೂ ಈಶ್ವರಪ್ಪ ವಿರುದ್ಧ ದೂರು ನೀಡಿದ್ದೇನೆ. ಈಶ್ವರಪ್ಪ ಅವರು ಹೊರ ರಾಜ್ಯದಲ್ಲಿ ಬೇನಾಮಿ ಕಂಪೆನಿ ನಡೆಸುತ್ತಿದ್ದು, ನೂರಾರು ಕೋಟಿ ರೂ. ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ತಮ್ಮ ಮಕ್ಕಳ ಮತ್ತು ಅಳಿಯಂದಿರ ಹೆಸರಿನಲ್ಲೂ ಈಶ್ವರಪ್ಪ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಆರೋಪ ಮಾಡಿದರು.





