ಯಚೂರಿ ಮೇಲೆ ಹಲ್ಲೆ ಯತ್ನ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ
ಇದು ನಾಚಿಗೇಡಿನ ಕೃತ್ಯ:ಸಿ.ಕುಮಾರಿ ತರಾಟೆ

ಮಂಡ್ಯ, ಜೂ.8: ಸಿಪಿಐ(ಎಂ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಮೇಲಿನ ಹಲ್ಲೆ ಯತ್ನ ಹಾಗೂ ಮಧ್ಯಪ್ರದೇಶದಲ್ಲಿ ರೈತರ ಮೇಲಿನ ಗೋಲಿಬಾರ್‌ಖಂಡಿಸಿ ಗುರುವಾರ ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಬೆಂಗಳೂರು ಮೈಸೂರು ಹೆದ್ದಾರಿಯ ಸಂಜಯ ವೃತ್ತಕ್ಕೆ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು, ಸಂಘಪರಿವಾರ, ಕೇಂದ್ರ ಬಿಜೆಪಿ ಮತ್ತು ಮಧ್ಯಪ್ರದೇಶದ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ವಲಯ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ಪತ್ರಕರ್ತರ ಸೋಗಿನಲ್ಲಿ ಸಿಪಿಎಂ ಕಚೇರಿ ಪ್ರವೇಶಿಸಿ ಸೀತಾರಾಂ ಯಚೂರಿ ಅವರ ಮೇಲೆ ಹಲ್ಲೆಗೆ ಯತ್ನಿಸಿರುವುದು ಆರ್‌ಎಸ್‌ಎಸ್‌ನ ಹಿಂದೂ ಸೇನಾ ಕಾರ್ಯಕರ್ತರ ಕೃತ್ಯ ನಾಚಿಕೆಗೇಡಿನದು ಎಂದು ಟೀಕಿಸಿದರು.
ನಿಜಕ್ಕೂ ಕೋಮುವಾದಿಗಳ ಅಸಲಿ ಮುಖ ಬಯಲುಗೊಳ್ಳುವ ಭೀತಿಯಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಇದೆ ಎನ್ನುವುದು ಮತ್ತೆ ಈ ಕೃತ್ಯದಿಂದ ಸಾಬೀತಾಗಿದೆ. ಸೈದ್ಧಾಂತಿಕವಾಗಿ ಎದುರುಗೊಳ್ಳದೆ ದಾಳಿಗೆ ಮುಂದಾಗಿರುವ ಆರ್‌ಎಸ್‌ಎಸ್‌ನ ದುರುಳತೆ ಪ್ರದರ್ಶನವಾಗಿದೆ ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಅಭಿವೃದ್ಧಿ ಬದಲಿಗೆ ಅನಭಿವೃದ್ಧಿ ಕಡೆ ಹೆಜ್ಜೆಯಿಟ್ಟಿರುವುದಕ್ಕೆ ಮಧ್ಯಪ್ರದೇಶದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ನಿರ್ದಶನವಾಗಿದೆ ಎಂದು ಅವರು ಆರೋಪಿಸಿದರು.
ರೈತಪರ ನಿಲುವು ತಾಳುವಲ್ಲಿ ವಿಫಲವಾಗಿರುವ ಕೇಂದ್ರದ ಮೋದಿ ಸರಕಾರ, ಹೋರಾಟ ನಿರತ ರೈತರನ್ನು ಕೊಂದುಹಾಕಿದೆ. ಈ ಘಟನೆಗೆ ಮಧ್ಯಪ್ರದೇಶ ಮತ್ತು ಕೇಂದ್ರ ಸರಕಾರಗಳು ಹೊಣೆ ಎಂದು ಪ್ರತಿಭಟನಾಕಾರರು ದೂರಿದರು.
ಬಿಜೆಪಿ, ಸಂಘಪರಿವಾರಗಳು ಇಂತಹ ಹತಾಶೆ ದಾಳಿಗಳನ್ನು ಕೈಬಿಟ್ಟು ಉತ್ತಮ ವಿಚಾರದತ್ತ ಯೋಚಿಸಬೇಕು. ಬೆಳೆ ಇಲ್ಲದೆ ಬರಗಾಲದಲ್ಲಿ ತತ್ತರಿಸಿರುವ ಚ ಮಾಡಬೇಕು. ದೇಶದ ಅನ್ನದಾತನ ಉಳಿವಿಗಾಗಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಎನ್.ಸುರೇಂದ್ರ, ಚಂದ್ರಶೇಖರ್, ರಾಜೇಂದ್ರಸಿಂಗ್ ಬಾಬು, ಕುಮಾರ್, ಶ್ರೀಧರ್, ಕೃಷ್ಣಮೂರ್ತಿ, ರತ್ನಮ್ಮ, ಕನ್ಯಮ್ಮ, ಅಬ್ದುಲ್ಲಾ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







