ಮ.ಪ್ರದೇಶ ಸರಕಾರ ವಜಾಗೊಳಿಸಲು ಬಿಎಸ್ಪಿ ಒತ್ತಾಯ
ಮಂಡ್ಯ, ಜೂ.8: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರೈತರ ಬಗ್ಗೆ ಕಿಂಚಿತ್ ಕಾಳಜಿಯಿದ್ದರೆ ರೈತರನ್ನು ಗುಂಡಿಟ್ಟು ಕೊಂದಿರುವ ಮಧ್ಯಪ್ರದೇಶದ ಶಿವರಾಜ್‌ಸಿಂಗ್ ಚೌಹಾಣ್ ಸರಕಾರವನ್ನು ವಜಾಗೊಳಿಸಿ, ರೈತರ ಸಾಲಮನ್ನಾ ಮಾಡಲಿ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ರೈತರ ಮೇಲಿನ ಗೋಲಿಬಾರ್ ಕೃತ್ಯ ಖಂಡಿಸಿರುವ ಅವರು, ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ಪ್ರತಿಭಟನಾ ನಿರತರ ಮೇಲೆ ಗೋಲಿಬಾರ್ ಮಾಡಿ ಆರು ಜನ ರೈತರ ಸಾವಿಗೆ ಕಾರಣವಾದ ಶಿವರಾಜ್‌ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರದ ವರ್ತನೆ ಮತ್ತು ರೈತರ ಸಾಲಮನ್ನಾ ವಿಚಾರದಲ್ಲಿ ಮೋದಿ ಸರಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮತ್ತು ಅಚ್ಚೇದಿನ್ ಆಯೇಗಾ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದು ಮೂರನೆ ವರ್ಷಾಚರಣೆಯಲ್ಲಿರುವ ಮೋದಿ ಸರಕಾರ, ಅವರದೇ ಬಿಜೆಪಿ ಸರಕಾರವಿರುವ ಮಧ್ಯಪ್ರದೇಶದಲ್ಲಿ ರೈತರನ್ನು ಗುಂಡಿಕ್ಕಿ ಕೊಂದಿರುವುದು ಯಾರ ವಿಕಾಸಕ್ಕಾಗಿ ಮತ್ತು ಯಾರಿಗೆ ಅಚ್ಚೇದಿನ ಬಂದಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.





