ಕಡಲ ತಡಿಯ ಬದುಕಿಗೆ ಮಳೆಗಾಲದಲ್ಲಿ ತಪ್ಪಿದ್ದಲ್ಲ ಆತಂಕ

ಮಂಗಳೂರು, ಜೂ.8: ಕಡಲು ನೋಡಲು ಅದೆಷ್ಟು ಮನೋಹರವೋ, ಮಳೆಗಾಲದ ಸಂದರ್ಭ ಕಡಲ ತಡಿಯಲ್ಲಿ ವಾಸಿಸುವವರು ಮಾತ್ರ ಆತಂಕದಲ್ಲೇ ದಿನ ಕಳೆಯಬೇಕಾದ ಪರಿಸ್ಥಿತಿ ಮಾತ್ರ ಇನ್ನೂ ಬದಲಾಗಿಲ್ಲ. ಕಡಲು ಕೂಡಾ ವರ್ಷದಿಂದ ವರ್ಷಕ್ಕೆ ಜನರ ವಾಸ ತಾಣಕ್ಕೆ ಹತ್ತಿರವಾಗುತ್ತಾ ವಿಶಾಲಗೊಳ್ಳುತ್ತಿರುವಂತೆಯೇ ಕಡಲ ತಡಿಯ ಜನರ ಆತಂಕವೂ ಹೆಚ್ಚಾಗುತ್ತಿದೆ.
ಮಳೆಗಾಲದಲ್ಲಿ ಸುಮಾರು ಮೂರು ತಿಂಗಳ ಅವಧಿಯಲ್ಲಿ ಹಗಲು ರಾತ್ರಿಯಲ್ಲಿ ಮೈಯೆಲ್ಲಾ ಕಣ್ಣಾಗಿ ಜೀವಿಸುವ ಪರಿಸ್ಥಿತಿ. ಇದು ಉಳ್ಳಾಲ, ಸೋಮೇಶ್ವರ ಸೇರಿದಂತೆ ಜಿಲ್ಲೆಯ ಕರಾವಳಿ ತೀರದ ಜನರ ಮುಗಿಯದ ಬವಣೆ.
ಉಳ್ಳಾಲ ಕಡಲ ತೀರದಲ್ಲಿ ಒಂದೆಡೆ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರದ ಪ್ರಥಮ ಹಂತದ ಕಾಮಗಾರಿ ಇನ್ನೇನು ಮುಕ್ತಾಯ ಹಂತದಲ್ಲಿದೆ. ಆದರೆ ಈ ಕಾಮಗಾರಿಯ ನಡುವೆಯೇ ಉಳ್ಳಾಲದ ಕೈಕೋದಲ್ಲಿ ಮನೆಯೊಂದು ಭಾಗಶ: ನೀರು ಪಾಲಾಗಿದೆ. ಮನೆಯ ಕೆಲವೊಂದು ಸಾಮಗ್ರಿಗಳನ್ನು ಕಡಲ ನೀರು ತನ್ನ ಒಡಲಾಳಕ್ಕೆ ಎಳೆದೊಯ್ದಿದೆ. ಈ ಘಟನೆ ಬೆಳಗ್ಗಿನ ಹೊತ್ತಿನಲ್ಲಿ ನಡೆದಿರುವುದು. ಆದ್ದರಿಂದಾಗಿ ಮನೆಯಲ್ಲಿದ್ದ ತಾಯಿ ಸಹಿತ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಆದರೆ ಸುಮಾರು 22 ವರ್ಷಗಳಿಂದ ವಾಸವಾಗಿದ್ದ ಮನೆಯ ಒಂದು ಭಾಗ ಮಾತ್ರ ಅವರ ಕಣ್ಣೆದುರೇ ನೀರುಪಾಲಾಯಿತು. ಪ್ರಸ್ತುತ ಆ ಪ್ರದೇಶದಲ್ಲಿ ಭಾರೀ ಬಂಡೆ ಕಲ್ಲುಗಳನ್ನು ಕ್ರೇನ್ ಮೂಲಕ ಹಾಕಿ ಕಡಲಿನ ಅಲೆಗಳಿಗೆ ತಡೆಯೊಡ್ಡುವ ಪ್ರಯತ್ನ ನಡೆಯುತ್ತಿದೆ. ಇದೇ ವೇಳೆ ಸಮೀಪದ ಹಲವು ಮನೆಗಳು ಕೂಡಾ ಕಡಲ್ಕೊರೆತದ ಭೀತಿಯನ್ನು ಎದುರುಸುತ್ತಿವೆ. ಇದೇ ರೀತಿ ಮೊಗವೀರ ಪಟ್ನದಲ್ಲಿಯೂ ಜನರು ಮುಂದಿನ ದಿನಗಳಲ್ಲಿ ಕಡಲ ಅಬ್ಬರದ ಅಲೆಗಳ ಬಗ್ಗೆ ಈಗಾಗಲೇ ಆತಂಕಕ್ಕೀಡಾಗಿದ್ದಾರೆ.
ಕಡಲು ವಿಸ್ತಾರಗೊಳ್ಳುತ್ತಿದೆ, ಆತಂಕ ಹೆಚ್ಚತ್ತಿದೆ:
‘‘ಸುಮಾರು 22 ವರ್ಷಗಳಿಂದ ನಾನಿಲ್ಲಿ ವಾಸಿಸುತ್ತಿದ್ದೇನೆ. ಹಿಂದೆ ಕಡಲು ಬಲು ದೂರದಲ್ಲಿತ್ತು. ಇದೀಗ ಕೆಲ ವರ್ಷಗಳಿಂದ ಮಳೆಗಾಲದಲ್ಲಿ ನೀರು ನಮ್ಮ ಮನೆಗೆ ಅಪ್ಪಳಿಸಲು ಆರಂಭಿಸಿತ್ತು. ಈ ವರ್ಷ ನನ್ನ ಮನೆಯು ಭಾಗಶ: ನೀರು ಪಾಲಾಗಿದೆ. ಇದ್ದ ಒಂದು ಸೂರು ಇಲ್ಲವಾಗಿದೆ. ಇದೀಗ ಸ್ಥಳೀಯರು ನನ್ನನ್ನು ಹಾಗೂ ಮಗಳನ್ನು ಇಲ್ಲೇ ಇರುವ ಮನೆಯೊಂದರಲ್ಲಿ 10 ದಿನಗಳವರೆಗೆ ಇರಲು ವ್ಯವಸ್ಥೆ ಮಾಡಿದ್ದಾರೆ. ಮುಂದೆ ಏನೋ ತಿಳಿಯದು’’ ಎಂದು ಕೈಕೋದ ಇಂದಿರಾನಗರದಲ್ಲ್ಲಿ ಕಳೆದ ಮಂಗಳವಾರ ಕಡಲ್ಕೊರೆತದಿಂದ ಭಾಗಶ: ಮನೆ ನೀರು ಪಾಲಾಗಿ ಕಂಗಾಲಾಗಿರುವ ನೆಫಿಸಾ ಆತಂಕ ವ್ಯಕ್ತಪಡಿಸಿದ್ದಾರೆ.
10ನೆ ತರಗತಿ ಓದುತ್ತಿರುವ ಹೆಣ್ಣು ಮಗಳೊಂದಿಗೆ ನೆಫಿಸಾ ಪ್ರಸ್ತುತ ಭಾಗಶ: ಸಮುದ್ರ ಪಾಲಾಗಿರುವ ತಮ್ಮ ಮನೆಯ ಪಕ್ಕದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಾರೆ.
‘‘ನಾನು ಈ ಭಾಗದಲ್ಲಿ ಕಳೆದ 37 ವರ್ಷಗಳಿಂದ ನನ್ನ ಕುಟುಂಬದ ಜತೆ ವಾಸವಾಗಿದ್ದೇನೆ. ಕಡಲು ವರ್ಷದಿಂದ ವರ್ಷಕ್ಕೆ ವಿಸ್ತಾರಗಳೊಳ್ಳುತ್ತಾ ಕಡಲ ದಂಡೆ ಕರಗುತ್ತಾ ಸಾಗುತ್ತಿದೆ. ಹಾಗೆಯೇ ಇಲ್ಲಿ ವಾಸಿಸುತ್ತಿರುವವರ ಆತಂಕವನ್ನೂ ಹೆಚ್ಚಿಸಿದೆ’’ ಎನ್ನುತ್ತಾರೆ ಕೈಕೆ ನಿವಾಸಿ 77ರ ಹರೆಯದ ಯೂಸುಫ್.
ಕರ್ನಾಟಕಕ್ಕೆ ಬುಧವಾರದಿಂದ ಅಧಿಕೃತವಾಗಿ ಮುಂಗಾರು ಆಗಮನವಾಗಿದ್ದರೂ, ಕಳೆದ ಒಂದು ವಾರದಿಂದೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಕಡಲ್ಕೊರೆತ ಸಮಸ್ಯೆ ಕಳೆದ ಸೋಮವಾರದಿಂದಲೇ ಕಾಣಿಸಿಕೊಂಡಿದೆ. ಈ ಭೀತಿ ಮಳೆಗಾಲ ಮುಗಿಯುವವರೆಗೂ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಕಡಲು ಮತ್ತಷ್ಟು ಪ್ರಕ್ಷುಬ್ಧಗೊಳ್ಳುತ್ತಾ ಸಾಗುತ್ತದೆ ಎಂಬುದು ಸ್ಥಳೀಯ ಮೀನುಗಾರರ ಅಭಿಪ್ರಾಯ.
ಸೋಮೇಶ್ವರ ಬೀಚ್‌ನಿಂದ ಮುಂದೆ ಸಾಗಿ ಮೊಗವೀರ ಪಟ್ಣದ ಬಳಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಸಮುದ್ರ ಕೊರೆತದಿಂದ ಭಾಗಶ: ಹಾನಿಗೊಳಗಾದ ಮನೆಯೊಂದು ಇಂದು ಕೂಡಾ ಮೂಕಸಾಕ್ಷಿಯಾಗಿ ಸಮುದ್ರ ಕೊರೆತದ ಭೀಕರತೆ, ಕಡಲ ಕಿನಾರೆಯ ಜನರ ಆತಂಕದ ಬದುಕಿಗೆ ಸಾಕ್ಷಿಯಾಗಿ ಹಾಗೇ ಇದೆ.
ಬೃಹದಾಕಾರದ ಮರಳ ಚೀಲಗಳು ಕಡಲ ಒಡಲಾಳಕ್ಕೆ:
ಕಡಲ್ಕೊರೆತದಿಂದ ಕಡಲ ತೀರದ ಮನೆಗಳಿಗೆ ಆಗುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಬಂಡೆಕಲ್ಲುಗಳು ಮಾತ್ರವಲ್ಲದೆ ಬೃಹದಾಕಾರದ ಮರಳ ಚೀಲಗಳನ್ನು ಸುಮಾರು ಮೂರು ವರ್ಷಗಳ ಹಿಂದೆ ಹಾಕಲಾಗಿತ್ತು. ಅವುಗಳಲ್ಲಿ ಬಹುತೇಕ ಚೀಲಗಳು ಸಮುದ್ರ ಪಾಲಾಗಿದ್ದರೆ, ಮತ್ತೆ ಕೆಲವು ಮರಳ ಚೀಲಗಳು ಒಡೆದು ಸ್ಥಳೀಯರ ಮನೆಗಳ ಅಂಗಳ ಸೇರಿವೆ. ಮತ್ತೆ ಕೆಲವು ಚೀಲಗಳು ಇನ್ನೂ ಸಮುದ್ರ ತೀರದಲ್ಲಿ ಕಾಣಸಿಗುತ್ತವೆ.
ಕಡಲ್ಕೊರೆತದ ಸಂದರ್ಭ ಪ್ರತಿ ಬಾರಿಯೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ಒಂದಷ್ಟು ದಬಾಯಿಸಿ ಶಾಶ್ವತ ಪರಿಹಾರದ ಭರವಸೆ ನೀಡಿ ಹೊರಟು ಹೋಗುತ್ತಾರೆ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರದ ಯೋಜನೆಯನ್ನು ಶೀಘ್ರವಾಗಿ ಹಾಗೂ ಸಮರ್ಪಕವಾಗಿ ಆದಾಗ ಮಾತ್ರವೇ ತಮ್ಮ ಬದುಕಿಗೆ ನೆಮ್ಮದಿ ಸಿಗಬಹುದು ಎಂಬುದು ಕಡಲತಡಿಯ ನಿವಾಸಿಗಳ ಆಶಾವಾದ.







