ಮದ್ಯದಂಗಡಿ ಸ್ಥಳಾಂತರ ಹೈಕೋರ್ಟ್ ಆದೇಶ ಉಲ್ಲಂಘನೆಯಿಲ್ಲ: ಸಿಎಂ
ಲಿಕ್ಕರ್ ಲಾಬಿಗೆ ಸರಕಾರ ಮಣಿದಿದೆ ಎಂದು ಬಿಜೆಪಿ ಸದಸ್ಯರಿಂದ ಸಭಾತ್ಯಾಗ

ಬೆಂಗಳೂರು, ಜೂ.8: ರಾಷ್ಟ್ರೀಯ ಹೆದ್ದಾರಿ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳ ಸ್ಥಳಾಂತರಗೊಳಿಸುವಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಸರಕಾರ ಉಲ್ಲಂಘಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಂತೆಯೇ ಬಿಜೆಪಿ ಸದಸ್ಯರು ರಾಜ್ಯ ಸರಕಾರ ಲಿಕ್ಕರ್ ಲಾಬಿಗೆ ಮಣಿದಿದೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು.
ಗುರುವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯರಾದ ಎಂ.ಕೆ.ಪ್ರಾಣೇಶ್, ಭಾನುಪ್ರಕಾಶ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಇಪ್ಪತ್ತು ಸಾವಿರ ಜನಸಂಖ್ಯೆ ಇರುವ ನಗರ, ಪಟ್ಟಣಗಳಲ್ಲಿ 220 ಮೀ. ವ್ಯಾಪ್ತಿಯಲ್ಲಿ ಹಾಗೂ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರ, ಪಟ್ಟಣಗಳಲ್ಲಿ 500 ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವ ಸಂಬಂಧ ರಸ್ತೆಗಳನ್ನು ಸರಕಾರ ಡಿನೋಟಿಫಿಕೇಷನ್ ಮಾಡಿದೆ. ಆದರೆ, ಸುಪ್ರೀಂಕೋರ್ಟ್‌ನ ಯಾವುದೇ ಆದೇಶವನ್ನು ಉಲ್ಲಂಘನೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ರಾಜ್ಯ ಸರಕಾರ ಕುಡಿತದ ಪರವೂ ಇಲ್ಲ. ವಿರೋಧವೂ ಇಲ್ಲ. ಕುಡಿಯಬಾರದು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ, ಪ್ರಾಯೋಗಿಕವಾಗಿ ಅದನ್ನು ನಿಲ್ಲಿಸಲು ಆಗುವುದಿಲ್ಲ. ಕುಡಿತ ಒಂದು ಚಟ, ಬಿಡಿಸುವುದು ಕಷ್ಟ, ಅದು ಸೀಮಿತವಾಗಿದ್ದರೆ ಒಳ್ಳೆಯದು. ಚಟವಾಗುವುದು ಬೇಡ. ಕುಡಿತವನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಮನಗಂಡೇ ಸರಕಾರ ಇಂತಹದೊಂದು ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದರು.
ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವುದರಿಂದ ಬಡವರ ಬದುಕು ಹಸನಾಗುತ್ತದೆ ಎನ್ನುವುದು ಸುಳ್ಳು. ಸಾರಾಯಿ ಮಾರಾಟ ನಿಷೇಧ ಮಾಡಿದ ಬಳಿಕ ಜನರು ವಿಸ್ಕಿ ಕುಡಿಯುತ್ತಿದ್ದಾರೆ. ಸಾರಾಯಿ ಮಾರಾಟ ನಿಷೇಧದ ಬಳಿಕ ಅದನ್ನೆ ಅವಲಂಬಿಸಿದ್ದ ಬಹಳಷ್ಟು ಜನರು ಬೀದಿಗೆ ಬಂದಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸಲು ಇದುವರೆಗೂ ಸಾಧ್ಯವಾಗಿಲ್ಲ ಎಂದು ಹೇಳಿದರು.
ಮದ್ಯ ಮಾರಾಟ ನಿಷೇಧದಿಂದ ಸರಕಾರದ ಆದಾಯಕ್ಕೆ ನಷ್ಟವಾಗಲಿದೆ. ಅಲ್ಲದೆ, ಇದನ್ನೆ ನಂಬಿ ಬದುಕುತ್ತಿರುವ ಲಕ್ಷಾಂತರ ಮಂದಿ ಬೀದಿಗೆ ಬರಲಿದ್ದಾರೆ. ಇದನ್ನು ಮನಗಂಡು ಸರಕಾರ ರಸ್ತೆ ಬದಿ ಬಾರ್‌ಗಳನ್ನು ಡಿನೋಟಿಫಿಕೇಷನ್ ಮಾಡಲು ನಿರ್ಧರಿಸಿದೆ ಎಂದು ಹೇಳಿದರು.
ಈ ವೇಳೆ ಕೆ.ಎಸ್.ಈಶ್ವರಪ್ಪ, ತಾರಾ ಅನೂರಾಧ ಸೇರಿದಂತೆ ಬಿಜೆಪಿಯ ಹಲವು ಸದಸ್ಯರು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ಯ ಮಾರಾಟದಿಂದ ಬಡ ಜನರು ಬೀದಿಗೆ ಬಂದಿದ್ದಾರೆ ಎಂದು ಆಗ್ರಹಿಸಿದರು.
ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಮದ್ಯ ಮಾರಾಟ ನಿಷೇಧಕ್ಕೆ ಸಂಬಂಧಪಟ್ಟಂತೆ ಸಮಿತಿಯನ್ನು ರಚಿಸಿದ್ದರು. ಆ ಸಮಿತಿಯು ಗುಜರಾತ್, ಆಂಧ್ರಪ್ರದೇಶ, ಕೇರಳ ಸೇರಿ ಇತರೆ ರಾಜ್ಯಗಳಿಗೂ ಭೇಟಿ ನೀಡಿ ಪರಿಶೀಲಿಸಿದಾಗ ಎಲ್ಲಿಯೂ ಮದ್ಯ ಮಾರಾಟ ನಿಷೇಧವಾಗಿರಲಿಲ್ಲ. ಹಾಗೂ ಆ ಸಮಿತಿಯಲ್ಲಿ ನಾನೂ ಇದ್ದೆ ಎಂದು ಹೇಳಿದರು.







