ಮಲಯಾಳಂ ಕಡ್ಡಾಯ ವಿರೋಧಿಸಿ ಕರವೇ ‘ಕಾಸರಗೋಡು ಚಲೋ’ಗೆ ಉಡುಪಿಯಲ್ಲಿ ಚಾಲನೆ

ಉಡುಪಿ, ಜೂ.8: ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಿರುವ ಕೇರಳ ಸರಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಗುರುವಾರ ಹಮ್ಮಿಕೊಂಡ ಕಾಸರಗೋಡು ಚಲೋ ಕಾರ್ಯಕ್ರಮಕ್ಕೆ ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿಯ ಕ್ಲಾಕ್ ಟವರ್ ಎದುರು ಚಾಲನೆ ನೀಡಿದರು.
ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ಆದರೆ ಅದು ಇನ್ನೂ ಆಗಿಲ್ಲ. ಇದೀಗ ಕಾಸರಗೋಡು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ ಗೊಳಿಸಿರುವುದರಿಂದ ಕನ್ನಡ ಭಾಷೆ ನಶಿಸಿ ಹೋಗಲಿದೆ. ಆ ರೀತಿ ಆಗದಂತೆ ರಾಜ್ಯ ನಾಯಕರು ಎಚ್ಚರ ವಹಿಸಬೇಕಾಗಿದೆ. ಗಡಿನಾಡಿನಲ್ಲಿ ಕನ್ನಡಗರಿಗೆ ಆಗುತ್ತಿರುವ ತೊಂದರೆಗಳನ್ನು ಸರಕಾರ ಕೂಡಲೇ ಸರಿಪಡಿಸಬೇಕು. ರಾಜ್ಯರಾಜ್ಯಗಳ ಮಧ್ಯೆ ಉತ್ತಮ ಸಂಬಂಧ ಮೂಡಿ ಗಡಿಪ್ರದೇಶಗಳ ಅಭಿವೃದ್ಧಿ ಆಗಬೇಕು ಎಂದು ಸ್ವಾಮೀಜಿ ತಿಳಿಸಿದರು.
ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ತಲಪಾಡಿ ಯಲ್ಲಿ ಕಾಸರಗೋಡು ಗಡಿ ದಾಟುವ ಮೂಲಕ ಕೇರಳ ಸರಕಾರಕ್ಕೆ ಎಚ್ಚರಿಕೆ ಯನ್ನು ಕೊಡುತ್ತಿದ್ದೇವೆ. ಕಾಸರಗೋಡಿನಲ್ಲಿ ಕನ್ನಡಿಗರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಿದ್ಧರಾಮಯ್ಯ ಈಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೇರಳ ಸರಕಾರ ಕನ್ನಡಿಗರ ಮೇಲೆ ಮಲಯಾಳಂ ಭಾಷೆಯನ್ನು ಹೇರುತ್ತಿದೆ. ಇದು ಖಂಡನೀಯ. ಕಾಸರಗೋಡಿನಲ್ಲಿ ಕನ್ನಡಿಗರ ಮೇಲೆ ನಿರಂತರ ದಾಳಿ ನಡೆಸಲಾಗುತ್ತಿದೆ. ನಮ್ಮನ್ನು ಆಳುವ ಸಂಸದರು, ಶಾಸಕರು ನಿದ್ದೆ ಮಾಡದೆ ಎಚ್ಚೆತ್ತುಕೊಳ್ಳಬೇಕಾಗಿದೆ. ಕಾಸರಗೋಡು ಕರ್ನಾಟಕ್ಕೆ ಸೇರಿಸಬೇಕೆಂಬ ಮಹಾ ಜನ್ ಆಯೋಗದ ವರದಿಯನ್ನು ಯಥಾವತ್ ಜಾರಿಗೊಳಿಸಬೇಕು. ಮುಂದೆ ಜೂ.12ರಂದು ರಾಜ್ಯ ಬಂದ್‌ಗೆ ಕರೆ ನೀಡಲಾಗಿದೆಯೆಂದು ಅವರು ತಿಳಿಸಿದರು.







