ಜಿಎಸ್‌ಟಿ ವಿರೋಧಿಸಿ ಚಿತ್ರರಂಗ ಬೀದಿಗಿಳಿಯಲಿ: ಬರಗೂರು ರಾಮಚಂದ್ರಪ್ಪ
ಕನ್ನಡ ಚಿತ್ರರಂಗದ ಹೋರಾಟಕ್ಕೆ ರಾಜ್‌ಕುಮಾರ್ ಪ್ರೇರಣೆಯಾಗಲಿ
.jpg)
ಬೆಂಗಳೂರು, ಜೂ.8: ಸಿನೆಮಾಗಳ ಮೇಲೆ ವಿಧಿಸಿರುವ ಶೇ.28ರಷ್ಟು ಜಿಎಸ್‌ಟಿ ತೆರಿಗೆಯನ್ನು ವಿರೋಧಿಸಿ ಕನ್ನಡ ಚಿತ್ರರಂಗ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ಈ ಹೋರಾಟಕ್ಕೆ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಬದುಕು ಪ್ರೇರಣೆಯಾಗಲಿ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ಗುರುವಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಇಲಾಖೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಪಾರ್ವತಮ್ಮ ರಾಜ್‌ಕುಮಾರ್ ಒಂದು ನೆನಪು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿನೆಮಾಗಳ ಮೇಲೆ ಶೇ.28ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿರುವುದು ಕನ್ನಡ ಚಿತ್ರರಂಗವನ್ನು ಅಪಾಯಕ್ಕೆ ಈಡುಮಾಡಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಡಾ.ರಾಜ್‌ಕುಮಾರ್ ಕುಟುಂಬದಲ್ಲಿ ಸಣ್ಣಪುಟ್ಟ ವೈಮನಸುಗಳಿದ್ದರೂ ಬೀದಿ ರಂಪ ಆಗಲಿಲ್ಲ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಒಂದೆಡೆ ಕುಳಿತು ಬಗೆ ಹರಿಸಿಕೊಳ್ಳುತ್ತಿದ್ದರು. ಹೀಗಾಗಿ ಡಾ.ರಾಜ್‌ಕುಮಾರ್ ಮನೆಯನ್ನು ಸಿನೆಮಾ ರಂಗದವರು ‘ದೊಡ್ಮನೆ’ ಎಂದು ಕರೆಯುತ್ತಿದ್ದರು. ಸಿನಿಮಾ ರಂಗವೂ ದೊಡ್ಮನೆ ರೀತಿಯಲ್ಲಿ ಒಗ್ಗಟ್ಟಿನಿಂದ ಮುನ್ನಡೆಯಬೇಕಾಗಿದೆ ಎಂದು ಅವರು ಆಶಿಸಿದರು.
ಪಾರ್ವತಮ್ಮ ರಾಜ್‌ಕುಮಾರ್ ಕಾರುಣ್ಯ-ಕಾಠಿಣ್ಯ ಎರಡು ಗುಣಗಳನ್ನು ಹೊಂದಿದ್ದ ಅಪರೂಪದ ಮಹಿಳೆಯಾಗಿದ್ದರು. ಮನೆ-ಸಂಬಂಧಗಳಲ್ಲಿ ಕಾರುಣ್ಯವನ್ನು ವ್ಯಕ್ತಪಡಿಸಿದರೆ, ಕಚೇರಿ-ವ್ಯವಹಾರದಲ್ಲಿ ಬಹಳ ಕಾಠಿಣ್ಯವುಳ್ಳವರಾಗಿದ್ದರು. ಇವೆರಡೂ ಗುಣಗಳಿದ್ದ ಕಾರಣದಿಂದಾಗಿಯೇ ಕುಟುಂಬ ಹಾಗೂ ಸಿನಿಮಾ ರಂಗದಲ್ಲಿ ಉತ್ತುಂಗ ಹಾಗೂ ಮಾದರಿ ಮಹಿಳೆಯಾಗಿ ಬೆಳೆಯಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಒಬ್ಬ ಗ್ರಾಮೀಣ ಮಹಿಳೆಯಾಗಿ 80ಕ್ಕೂ ಅಧಿಕ ಸಿನಿಮಾಗಳ ನಿರ್ಮಾಣ ಹಾಗೂ ವಿತರಣೆ ಮಾಡಿರುವುದು ಸುಲಭದ ಸಾಧನೆಯಲ್ಲ. ಅದರಲ್ಲೂ ಸದಭಿರುಚಿಯ ಸಿನಿಮಾ ನೀಡುವುದು ಸವಾಲಿನ ಕೆಲಸ. ಇದನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿರುವ ಪಾರ್ವತಮ್ಮ ರಾಜ್‌ಕುಮಾರ್ ಸಿನಿಮಾ ರಂಗಕ್ಕೆ ಮಾದರಿಯಾಗಿದ್ದಾರೆ ಎಂದು ಅವರು ಬಣ್ಣಿಸಿದರು.
ಕಿರುತೆರೆ ಮತ್ತು ಚಲನಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಂ ಮಾತನಾಡಿ, ಡಾ. ರಾಜ್‌ಕುಮಾರ್‌ರನ್ನು ಕನ್ನಡದ ಅಸ್ಮಿತೆ ಮತ್ತು ಕನ್ನಡದ ವ್ಯಕ್ತಿತ್ವವಾಗಿ ರೂಪಿಸಿದ ಕೀರ್ತಿ ಪಾರ್ವತಮ್ಮರಿಗೆ ಸಲ್ಲುತ್ತದೆ. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನಿತ್ ರಾಜ್‌ಕುಮಾರ್ ಸಿನಿಮಾ ರಂಗದಲ್ಲಿ ಈ ಎತ್ತರಕ್ಕೆ ಬೆಳೆದಿರುವುದಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ತ್ಯಾಗ ಬಹಳಷ್ಟಿದೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಡಾ.ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ವಾರ್ತಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಎಂ. ಲಕ್ಷ್ಮಿನಾರಾಯಣ್, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ ರಾಜೇಂದ್ರಸಿಂಗ್ ಬಾಬು ಸೇರಿದಂತೆ ರಾಜ್‌ಕುಮಾರ್ ಕುಟುಂಬ ವರ್ಗದವರು, ಅಭಿಮಾನಿಗಳು ಪಾಲ್ಗೊಂಡಿದ್ದರು.







