ಆತ್ಮಹತ್ಯೆಗೆ ಮುಂದಾದ ಉಪನ್ಯಾಸಕ ರಮೇಶ್ ಕುಟುಂಬ
ವೇತನ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ
ಬೆಂಗಳೂರು, ಜೂ. 8: ಕಾರ್ಯಭಾರದ ಕೊರತೆಯಿಂದ ಹನ್ನೊಂದು ವರ್ಷದಿಂದ ತಡೆ ಹಿಡಿದಿರುವ ಉಪನ್ಯಾಸಕರ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಗುರುವಾರ ನಗರದ ಪದವಿಪೂರ್ವ ಶಿಕ್ಷಣ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದ ಉಪನ್ಯಾಸಕರು ಹನ್ನೊಂದು ವರ್ಷದಿಂದ ವೇತನ ತಡೆ ಹಿಡಿದಿರುವ ಉಪನ್ಯಾಸಕ ರಮೇಶ್ ಅವರಿಗೆ ಕೂಡಲೇ ವೇತನವನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ವೇತನ ಬಿಡುಗಡೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರಮೇಶ್ ಕುಟುಂಬ ಸದಸ್ಯರೊಂದಿಗೆ ಆತ್ಮಹತ್ಯೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ. ಕೂಡಲೇ ಸರಕಾರ ಗಮನಹರಿಸಿ ರಮೇಶ್ ಅವರ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಒತ್ತಾಯಿಸಿದ್ದಾರೆ.
ಆತ್ಮಹತ್ಯೆ ಎಚ್ಚರಿಕೆ: ಗುರುವಾರ ಕುಟುಂಬ ಸಮೇತರಾಗಿ ಉಪನ್ಯಾಸಕ ರಮೇಶ್ ಪಿಯು ಮಂಡಳಿ ಎದುರು ಹಾಜರಾಗಿ ವೇತನ ಬಿಡುಗಡೆಗೆ ಪಟ್ಟು ಹಿಡಿದು ಧರಣಿ ಕುಳಿತರು. ಕೂಡಲೆ ನ್ಯಾಯ ದೊರಕದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು ಸಿಬ್ಬಂದಿ ವರ್ಗದವರಿಗೆ ಉದ್ದೇಶ ಪೂರ್ವಕವಾಗಿ ಆಡಳಿತ ಮಂಡಳಿಗಳು ಕಾರ್ಯಭಾರದ ಕೊರತೆ ಉಂಟು ಮಾಡಿ ಸಿಬ್ಬಂದಿಗಳ ಸೇವೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಉಪನ್ಯಾಸಕ ರಮೇಶ್ ಆರೋಪಿಸಿದರು.
ಹನ್ನೊಂದು ವರ್ಷಗಳಿಂದ ವೇತನವಿಲ್ಲದೆ ಜೀವನ ಸಾಗಿಸಲು ಅಸಾಧ್ಯವಾದ್ದರಿಂದ ನಾನು ನನ್ನ ಕುಟುಂಬ ಬೀದಿ ಪಾಲಾಗಿದೆ. ಕೂಡಲೇ ವೇತನ ಬಿಡುಗಡೆ ಮಾಡದಿದ್ದರೆ ಪಿಯು ಮಂಡಳಿ ಎದುರೆ ಆತ್ಮಹತ್ಯೆಗೆ ಮುಂದಾಗುತ್ತೇವೆ ಎಂದು ರಮೇಶ್ ಎಚ್ಚರಿಕೆ ನೀಡಿದರು.







