ರೈತರ ಮೇಲೆ ಗೋಲಿಬಾರ್: ವೆಲ್ಫೇರ್ ಪಾರ್ಟಿ ಖಂಡನೆ
ಬೆಂಗಳೂರು, ಜೂ.8: ಮಧ್ಯಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಗೋಲಿಬಾರ್ ನಡೆಸುವ ಮೂಲಕ ಕೇಂದ್ರ ಸರಕಾರ ಪ್ರತಿಭಟನಾಕಾರರ ಧ್ವನಿಯನ್ನು ಅಡಗಿಸಲು ಮುಂದಾಗಿದೆ ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಹರಿಹರ ತೀವ್ರವಾಗಿ ಖಂಡಿಸಿದ್ದಾರೆ.
ಅನ್ನದಾತ ರೈತ ತನ್ನ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟಿಸುವಾಗ ಸರಕಾರವೇ ಗುಂಡಿಕ್ಕಿ ಕೊಲ್ಲಲು ಮುಂದಾಗಿದೆ. ಈ ಆತಂಕಕಾರಿ ಪ್ರವೃತ್ತಿಯನ್ನು ಸಮರ್ಪಕವಾಗಿ ಎದುರಿಸದಿದ್ದರೆ ದೇಶದ ಭವಿಷ್ಯ ಅತ್ಯಂತ ಕರಾಳವಾಗಿರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರೈತರು ಹಾಗೂ ಜನಸಾಮಾನ್ಯರ ಸಮಸ್ಯೆಗೆ ಪರಿಹಾರ ನೀಡಬೇಕಾದ, ನೀಡಲು ಅಗತ್ಯವಾದ ಸಂಪನ್ಮೂಲಗಳನ್ನು ಕೈಯಲ್ಲಿಟ್ಟುಕೊಂಡಿರುವ ಕೇಂದ್ರ ಸರಕಾರ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗುವ ನೀತಿಗಳನ್ನು ದೇಶದ ಮೇಲೆ ಹೇರುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಮೂಲಭೂತ ಬೇಡಿಗೆಗಾಗಿ ಪ್ರತಿಭಟಿಸಲು ಮುಂದಾಗಿರುವ ಪ್ರತಿಭಟನಾಕಾರರನ್ನು ಗೋಲಿಬಾರ್ ಮೂಲಕ ಹತ್ತಿಕ್ಕಲು ಸರಕಾರ ಮುಂದಾಗಿರುವುದು ಸರಿಯಲ್ಲ. ಹಾಗೆಯೇ ಎನ್‌ಡಿಟಿವಿ ಮೇಲಿನ ದಾಳಿ ಮೂಲಕ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರವನ್ನು ಕಸಿಯುವ ಷಡ್ಯಂತ್ರ ನಡೆಸುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ಸರಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕುವ ಮೂಲಕ ಜನ ಸಾಮಾನ್ಯರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಕಾರ್ಪೋರೇಟ್ ಧಣಿಗಳಿಗೆ ದೇಶವನ್ನು ಅಡವಿಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







