ಆಹಾರ, ಭೂಮಿ ಹಕ್ಕಿಗಾಗಿ ಜೂ.12ರಂದು ‘ಮೊವಾಡಿ ಚಲೋ’

ಉಡುಪಿ, ಜೂ.8: ಸಂಘ ಪರಿವಾರದ ಗುಂಡಾಗಿರಿಯನ್ನು ಖಂಡಿಸಿ, ಮೊವಾಡಿಯಲ್ಲಿ ಕೊರಗ ಯುವಕರ ಮೇಲೆ ಹಾಕಲಾಗಿರುವ ಮೊಕದ್ದಮೆ ಹಿಂದೆಗೆತಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಜೂ.12 ರಂದು ‘ಮೊವಾಡಿ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ದಸಂಸ ಮಹಾ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ತಲ್ಲೂರು ಹಾಗೂ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಘೋಷಣೆಯೊಂದಿಗೆ ಮೊವಾಡಿ ಯಲ್ಲಿ ಇತ್ತೀಚೆಗೆ ಸಂಘ ಪರಿವಾರದ ಗುಂಪಿನಿಂದ ದೌರ್ಜನ್ಯಕ್ಕೊಳಗಾದ ಕೊರಗ ಸಮುದಾಯದ ಮೊವಾಡಿಯ ಮನೆಯಿಂದ ಬೆಳಗ್ಗೆ 10 ಗಂಟೆಗೆ ಜಾಥಾ ಹೊರಡಲಿದ್ದು, 11ಗಂಟೆಗೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಬಹಿರಂಗ ಸಭೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದರು.
ಕಳೆದ ಎ. 25ರಂದು ಬೈಂದೂರು ಕ್ಷೇತ್ರದ ಹೊಸಾಡು ಗ್ರಾಮದ ಮೊವಾಡಿ ಗಾಣದಮಕ್ಕಿಯಲ್ಲಿರುವ ಕೊರಗ ಸಮುದಾಯಕ್ಕೆ ಸೇರಿದ ಹೊಸಾಡು ಗ್ರಾಪಂ ಸದಸ್ಯೆ ಶಕುಂತಳಾ ಮನೆಯಲ್ಲಿ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ದನದ ಮಾಂಸ ಮಾಡುತಿದ್ದಾರೆಂದು ಆರೋಪಿಸಿ ಸಂಘ ಪರಿವಾರದ ಒಂದು ಗುಂಪು ಮಧ್ಯರಾತ್ರಿ ಕೊರಗ ಸಮುದಾಯದ ಮನೆಗೆ ನುಗ್ಗಿ ಗುಂಡಾಗಿರಿ ನಡೆಸಿದ್ದು, ಶಕುಂತಳಾ ಸೇರಿದಂತೆ ಮನೆಯವರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸಿ, ಜೀವ ಬೆದರಿಕೆಯನ್ನೂ ಒಡ್ಡಿದ್ದರು ಎಂದವರು ದೂರಿದರು.
ಈ ಸಂದರ್ಭದಲ್ಲಿ ಪೊಲೀಸರು ಹಲ್ಲೆಕೋರರ ಮೇಲೆ ಯಾವ ಕೇಸು ದಾಖಲಿಸದೇ, ಕೊರಗ ಯುವಕರ ಮೇಲೆ ಕೇಸು ದಾಖಲಿಸಿದರು. ಅನಂತರ ದಲಿತ ಹಾಗೂ ಇತರ ಸಮುದಾಯದ ಒತ್ತಡದಿಂದ ಗಂಗೊಳ್ಳಿ ಪೊಲೀಸರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದರೂ, ಪ್ರಭಾವಿ ವ್ಯಕ್ತಿಗಳ ಸಹಕಾರದಿಂದ ಬಂಧನದಿಂದ ಪಾರಾಗಿ ಜಾಮೀನು ಪಡೆದು ರಾಜಾರೋಷವಾಗಿ ಕೊರಗ ಸಮುದಾಯದ ಮೇಲೆ ಬೆದರಿಕೆ, ದಬ್ಬಾಳಿಕೆ ನಡೆಸುತಿದ್ದಾರೆ ಎಂದು ತಲ್ಲೂರು ಆರೋಪಿಸಿದರು.
ಈ ವಿಷಯದಲ್ಲಿ ಸ್ಥಳೀಯ ಶಾಸಕರಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಕೊರಗರ ಪರವಾಗಿ ಧ್ವನಿ ಎತ್ತದಿರುವುದು ವಿಷಾಧನೀಯ. ಜನಪ್ರತಿನಿಧಿಗಳು ಆರೋಪಿಗಳ ಪರವಾಗಿ ನಿಂತಿರುವುದು ಖಂಡನೀಯ. ಸಂಘ ಪರಿವಾರದ ಗುಂಡಾಗಿರಿಯನ್ನು ಖಂಡಿಸುವ ನಾವು, ಮುಗ್ಡ ಹಾಗೂ ಅಸಹಾಯಕ ಕೊರಗ ಯುವಕರ ಮೇಲೆ ಹಾಕಿರುವ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ ಎಂದರು.
ಈ ನಡುವೆ ಕೇಂದ್ರ ಸರಕಾರ ರೈತರು ಹಾಗೂ ಜನಸಾಮಾನ್ಯರು ಸಾಕಿದ ಜಾನುವಾರಗಳ ಮಾರಾಟಕ್ಕೂ ನಿರ್ಬಂಧ ವಿದಿಸುವ ಕಾನೂನು ಜಾರಿಗೊ ಳಿಸಿದ್ದು, ಇದರ ಹಿಂದಿರುವುದು ‘ದನದ ರಾಜಕಾರಣ’. ಒಂದು ಕಡೆ ಅಲ್ಪಸಂಖ್ಯಾತರನ್ನು ದೇಶದ್ರೋಹಿಗಳು, ಧರ್ಮ ವಿರೋದಿಗಳು ಎನ್ನುತ್ತಾ, ಇನ್ನೊಂದೆಡೆ ದಲಿತ ವರ್ಗ ಅಸ್ತಿತ್ವ ಇಲ್ಲದ ರೀತಿ ನಡೆಸಿಕೊಂಡು ಅವಮಾನ ಗೊಳಿಸುವ ನಿರಂತರ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ದಾದ್ರಿ ಘಟನೆಗೆ ಸಾಮ್ಯತೆ:
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ಪ್ರಗತಿಪರ ಚಿಂತಕ ಜಿ.ರಾಜಶೇಖರ ಮಾತನಾಡಿ, ಮೊವಾಡಿಯಲ್ಲಿ ನಡೆದಿರುವ ಘಟನೆ ಅಖಿಲ ಭಾರತ ವ್ಯಾಪ್ತಿಯನ್ನು ಹೊಂದಿದ್ದು, ಉತ್ತರ ಪ್ರದೇಶದ ದಾದ್ರಿಯಲ್ಲಿ ಕಳೆದ ವರ್ಷ ನಡೆದ ಘಟನೆಗೆ ಸಾಮ್ಯತೆ ಇದೆ. ಹಿಂಸೆಯ ಗಾತ್ರದಲ್ಲಿ ವ್ಯತ್ಯಾಸ ಇರಬಹುದಾದರೂ, ಹಿಂಸೆಯ ಪ್ರಮಾಣ ಮಾತ್ರ ಒಂದೇ ಆಗಿದೆ ಎಂದರು.
ದೇಶದಲ್ಲಿ ಕೇವಲ ಆಹಾರಕ್ಕಾಗಿ ಮಾತ್ರ ಜಾನುವಾರಗಳ ಹತ್ಯೆ ನಡೆಯುತ್ತಿ ದೆಯೇ ಹೊರತು, ಹಿಂಸೆಯ ಆನಂದಕ್ಕಾಗಿ, ಖುಷಿಗಾಗಿ ಹತ್ಯೆ ನಡೆಸಿದ ಒಂದೇ ಒಂದು ಉದಾಹರಣೆಯನ್ನು ತೋರಿಸಲಿ ಎಂದವರು ಸವಾಲು ಹಾಕಿದರು.
12ರ ಮೊವಾಡಿ ಚಲೋಗೆ ಕೊರಗ ಸಂಘಟನೆಗಳ ಅಭಿವೃದ್ಧಿ ಒಕ್ಕೂಟ, ಜಿಲ್ಲಾ ಮುಸ್ಲಿಂ ಒಕ್ಕೂಟ, ಭಾರತೀಯ ಕ್ರೈಸ್ತ ಒಕ್ಕೂಟ, ಸಮತಾ ಸೈನಿಕ ದಳ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಸೇರಿದಂತೆ ಹಲವಾರು ಪ್ರಗತಿಪರ, ಜನಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಸುಂದರ ಮಾಸ್ತರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಂ.ವಿಲಿಯಂ ಮಾರ್ಟಿಸ್, ಪ್ರಶಾಂತ್ ಜತ್ತನ್ನ, ಎಸ್.ಎಸ್.ಪ್ರಸಾದ್, ಪರಮೇಶ್ವರ ಉಪ್ಪೂರು, ಸಿರಿಲ್ ಮಥಾಯಸ್ ಮುಂತಾದವರು ಉಪಸ್ಥಿತರಿದ್ದರು.







