5 ಕೆ.ಜಿ. ಬಂಗಾರದ ಆಸೆ ತೋರಿಸಿ ಪೋಷಕರ ಮುಂದೆಯೇ ಬಾಲಕಿಯನ್ನು ಅತ್ಯಾಚಾರಗೈದು, ಕೊಂದ ಮಂತ್ರವಾದಿ

ಕಾನ್ಪುರ, ಜೂ.8: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದ ದಂಪತಿ “5 ಕೆ.ಜಿ. ಬಂಗಾರ ಸಿಗುತ್ತದೆ” ಎಂಬ ಮಾಂತ್ರಿಕನ ಮಾತನ್ನು ನಂಬಿ ಸ್ವಂತ ಮಗಳನ್ನು ಬಲಿಕೊಟ್ಟಿದ್ದು, ಮಂತ್ರವಾದಿ ಆಕೆಯನ್ನು ಕೊಂದು ಅತ್ಯಾಚಾರಗೈದ ಘಟನೆ ಕನೌಜ್ ನಲ್ಲಿ ನಡೆದಿದೆ,
ಬಾಲಕಿಯ ತಂದೆ ಆಭರಣ ವ್ಯಾಪಾರಿ ಮಹಾವೀರ್ ಪ್ರಸಾದ್ (55) ಮಂತ್ರವಾದಿ ಕೃಷ್ಣ ಶರ್ಮಾ ವಿರುದ್ಧ ದೂರು ನೀಡಿದ್ದು, ಆತನನ್ನು ತಾತಿಯಾ ಗ್ರಾಮದಿಂದ ಪೊಲೀಸರು ಬಂಧಿಸಿದ್ದಾರೆ.
ತಮ್ಮ ಮಗಳನ್ನು ಬಲಿಕೊಟ್ಟರೆ ಅಂತ್ಯಸಂಸ್ಕಾರ ನಡೆಸಿದ ಗಂಟೆಯೊಳಗಾಗಿ ಮಣ್ಣಿನಡಿ 5 ಕಿಲೋ ಬಂಗಾರ ಸಿಗಲಿದೆ ಎಂದು ಮಹಾವೀರ್ ಹಾಗೂ ಅವರ ಪತ್ನಿ ಪುಷ್ಪಾರಲ್ಲಿ ಮಂತ್ರವಾದಿ ಕೃಷ್ಣ ಶರ್ಮಾ ಹೇಳಿದ್ದ.
ಅದರಂತೆ ದಂಪತಿ 15 ವರ್ಷದ ಮಗಳನ್ನು ಕರೆದುಕೊಂಡು ಅನ್ನಪೂರ್ಣ ದೇವಸ್ಥಾನಕ್ಕೆ ಹೋಗಿದ್ದು, ಅಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲಾಯಿತು, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಪೋಷಕರ ಮುಂದೆಯೇ ನಗ್ನಗೊಳಿಸಿದ್ದ ಶರ್ಮಾ ಆಕೆಯನ್ನು ಬಲಿ ನೀಡಿ ಮೈದಾನದಲ್ಲಿ ಎಸೆದಿದ್ದ. ಈ ಸಂದರ್ಭ ಬಾಲಕಿಯ ದೇಹವನ್ನು ಮರೆಮಾಚುವ ವೇಳೆ ಪೋಷಕರ ಮುಂದೆಯೇ ಬಾಲಕಿಯನ್ನು ಅತ್ಯಾಚಾರಗೈದಿದ್ದ. ನಂತರ ಆಕೆಯ ಕುತ್ತಿಗೆ ಕತ್ತರಿಸಿ ಬಲಿಗಾಗಿ ರಕ್ತ ಸಂಗ್ರಹಿಸಿದ್ದ ಎಂದು ಆರೋಪಿಸಲಾಗಿದೆ.
ಹೂತಿಟ್ಟ ಜಾಗದಿಂದ ಮೃತದೇಹವನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವಿಚಾರಣೆಗಾಗಿ ಬಾಲಕಿಯ ಪೋಷಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಎಸ್ಪಿ ಕೇಶವ್ ಗೋಸ್ವಾಮಿ ಮಾಹಿತಿ ನೀಡಿದ್ದಾರೆ.







