ವಾಹನ ಕಳವು ಆರೋಪಿಗಳ ಬಂಧನ
ಮಂಗಳೂರು, ಜೂ. 8: ಬೆಲೆ ಬಾಳುವ ವಸ್ತುಗಳನ್ನು ಹೊಂದಿರುವ ಬ್ಯಾಗ್ ಹಾಗೂ ವಾಹನಗಳನ್ನು ಎಗರಿಸುತ್ತಿದ್ದ ಮೂವರು ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸಿ, ಸುಮಾರು 73,000 ರೂ. ವೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಸುರತ್ಕಲ್ ಜನತಾ ಕಾಲನಿಯ ನಿವಾಸಿ ಆಂಜನೇಯ ಯಾನೆ ವಿಜಯ್, ಕದ್ರಿಯ ಕೌಶಿಕ್ ದೇವಾಡಿಗ, ಬಿಜೈ ಆನೆಗುಂಡಿಯ ರಕ್ಷಿತ್ ಕೋಟ್ಯಾನ್ ಎಂದು ಗುರುತಿಸಲಾಗಿದೆ.
ಎಸಿಪಿ ಉದಯ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಕದ್ರಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಮಾರುತಿ ನಾಯಕ್ ಅವರ ನೇತೃತ್ವದಲ್ಲಿ ಪಿಎಸ್‌ಐ ಹರೀಶ್, ಎಎಸ್‌ಐ ಶಶಿಧರ ಶೆಟ್ಟಿ, ಎಚ್‌ಸಿಗಳಾದ ವೆಂಕಟೇಶ್, ಉಮೇಶ್, ಪ್ರಶಾಂತ್, ಆಶಿತ್, ಪಿಸಿ ರವಿ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 50,000 ರೂ. ಮೌಲ್ಯದ ಹೋಂಡಾ ಆ್ಯಕ್ಟಿವಾ, ವಿವಿಧ ಕಂಪೆನಿಗಳ 23,000 ರೂ. ವೌಲ್ಯದ 5 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಈ ಹಿಂದೆ ಕದ್ರಿ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಹಾಗೂ ಮಣಿಪಾಲ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿತ್ತು ಎಂದು ಹೇಳಲಾಗಿದೆ.





