ಮನೆಯ ಬಾಲ್ಕನಿ ಕುಸಿದು ಮಗು ಮೃತ್ಯು: 19 ಮಂದಿಗೆ ಗಂಭೀರ ಗಾಯ

ವಾರಣಾಸಿ, ಜೂ.8: ಮನೆಯ ಬಾಲ್ಕನಿ ಕುಸಿದು ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟು 19ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಚೌಬಯ್ ಪುರ ಎಂಬಲ್ಲಿ ನಡೆದಿದೆ.
ಮದುವೆ ಸಮಾರಂಭದ ಮನೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮದುವೆ ಪಾರ್ಟಿಯಲ್ಲಿ ನಡೆಯುತ್ತಿದ್ದ ನೃತ್ಯ ಕಾರ್ಯಕ್ರಮವನ್ನು ವೀಕ್ಷಿಸಲು ಮಹಿಳೆಯರು ಹಾಗೂ ಮಕ್ಕಳು ಬಾಲ್ಕನಿಯಲ್ಲಿ ಸೇರಿದ್ದು, ಭಾರ ಹೆಚ್ಚಾದ ಕಾರಣ ಬಾಲ್ಕನಿ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಘಟನೆಯ ಪರಿಣಾಮ ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳುಗಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
19 ಮಂದಿ ಗಾಯಾಳುಗಳಲ್ಲಿ 5 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಬನಾರಸ್ ಹಿಂದೂ ಯುನಿವರ್ಸಿಟಿಯ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ದಾಖಲಿಸಲಾಗಿದೆ. ಗಾಯಗೊಂಡ ಮಕ್ಕಳು 6ರಿಂದ 12 ವರ್ಷದೊಳಗಿನವರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
Next Story





