ಫೋರ್ಬ್ಸ್ ಶ್ರೀಮಂತ ಅಥ್ಲೀಟ್: ರೊನಾಲ್ಡೊ ನಂ.1, ಕೊಹ್ಲಿಗೆ ಸ್ಥಾನ

ನ್ಯೂಯಾರ್ಕ್, ಜೂ.8: ಫೋರ್ಬ್ಸ್ ನಿಯತಕಾಲಿಕ ಬುಧವಾರ ಪ್ರಕಟಿಸಿರುವ ವಿಶ್ವದ ಅಗ್ರ 100 ಶ್ರೀಮಂತ ಅಥ್ಲೀಟ್‌ಗಳ ಪಟ್ಟಿಯಲ್ಲಿ ರಿಯಲ್ ಮ್ಯಾಡ್ರಿಡ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸತತ ಎರಡನೆ ವರ್ಷವೂ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪಟ್ಟಿಯಲ್ಲಿರುವ ಭಾರತದ ಏಕೈಕ ಕ್ರೀಡಾಪಟುವಾಗಿದ್ದಾರೆ.
28ರ ಹರೆಯದ ಕೊಹ್ಲಿ 2017ರ ಫೋರ್ಬ್ಸ್ ವಿಶ್ವ ಶ್ರೀಮಂತ ಅಥ್ಲೀಟ್‌ಗಳ ಪಟ್ಟಿಯಲ್ಲಿ 89ನೆ ಸ್ಥಾನದಲ್ಲಿದ್ದಾರೆ. ಸಂಭಾವನೆ, ಬಹುಮಾನ ಮೊತ್ತ(3 ಮಿಲಿಯನ್ ಡಾಲರ್)ಹಾಗೂ ಜಾಹೀರಾತು ಆದಾಯ(19 ಮಿಲಿಯನ್ ಡಾಲರ್) ಸೇರಿದಂತೆ ಒಟ್ಟು 22 ಮಿಲಿಯನ್ ಡಾಲರ್ ಆದಾಯ ಹೊಂದಿದ್ದಾರೆ.
ಕೊಹ್ಲಿ ಕಳೆದ ವರ್ಷ ಸಂಭಾವನೆ ಹಾಗೂ ಪಂದ್ಯಶುಲ್ಕದ ಮೂಲಕ ಸುಮಾರು 1 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದರು. ಐಪಿಎಲ್‌ನಲ್ಲಿ ಗರಿಷ್ಠ ಸಂಭಾವನೆ ಪಡೆದ ಆಟಗಾರ ಎನಿಸಿಕೊಂಡಿದ್ದ ಕೊಹ್ಲಿಗೆ ಆರ್‌ಸಿಬಿ 2.3 ಮಿಲಿಯನ್ ಡಾಲರ್ ಸಂಭಾವನೆ ನೀಡಿತ್ತು
2015ರಲ್ಲಿ ಬ್ಯಾಟಿಂಗ್‌ನಲ್ಲಿ ಹಲವು ದಾಖಲೆಯನ್ನು ನಿರ್ಮಿಸಿದ್ದ ಕೊಹ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕನ ಹುದ್ದೆಗೇರಿದ್ದರು. ಫೋರ್ಬ್ಸ್ ಪಟ್ಟಿಯಲ್ಲಿ ಫುಟ್ಬಾಲ್ ಸ್ಟಾರ್ ರೊನಾಲ್ಡೊ(93 ಮಿಲಿಯನ್ ಡಾಲರ್) ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅಮೆರಿಕದ ಬಾಸ್ಕೆಟ್‌ಬಾಲ್ ಸ್ಟಾರ್ ಲೆಬ್ರೊನ್ ಜೇಮ್ಸ್ ದ್ವಿತೀಯ ಸ್ಥಾನ(86.2 ಮಿಲಿಯನ್ ಡಾಲರ್), ಅರ್ಜೆಂಟೀನದ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ(80 ಮಿಲಿಯನ್ ಡಾಲರ್), ಟೆನಿಸ್ ಸ್ಟಾರ್ ರೋಜರ್ ಫೆಡರರ್(64 ಮಿಲಿಯನ್ ಡಾಲರ್) ಕ್ರಮವಾಗಿ ಮೂರನೆ ಹಾಗೂ ನಾಲ್ಕನೆ ಸ್ಥಾನ ಪಡೆದಿದ್ದಾರೆ. ಅಮೆರಿಕದ ಬಾಸ್ಕಟ್‌ಬಾಲ್ ಆಟಗಾರ ಕೆವಿನ್ ಡುರಾಂಟ್ ಐದನೆ ಸ್ಥಾನದಲ್ಲಿದ್ದಾರೆ.
23 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತೆ ಸೆರೆನಾ ವಿಲಿಯಮ್ಸ್ ಅಗ್ರ-100 ಶ್ರೀಮಂತರ ಅಥ್ಲೀಟ್‌ಗಳ ಪಟ್ಟಿಯಲ್ಲಿರುವ ಏಕೈಕ ಮಹಿಳಾ ಅಥ್ಲೀಟ್ ಆಗಿದ್ದಾರೆ. 27 ಮಿಲಿಯನ್ ಡಾಲರ್ ಆದಾಯ ಹೊಂದಿರುವ ಸೆರೆನಾ ಪಟ್ಟಿಯಲ್ಲಿ 51ನೆ ಸ್ಥಾನದಲ್ಲಿದ್ದಾರೆ.
ಜೂ.2016 ಹಾಗೂ ಜೂ.2017ರ ನಡುವೆ ಆಟಗಾರರ ಸಂಭಾವನೆ, ಬಹುಮಾನ ಮೊತ್ತ ಹಾಗೂ ಬೋನಸ್‌ಗಳ ಮೂಲಕ ಗಳಿಸುವ ಆದಾಯವನ್ನ್ನು ಪರಿಗಣಿಸಲಾಗುತ್ತದೆ. ಅಗ್ರ-100 ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ 21 ದೇಶಗಳ ಕ್ರೀಡಾಪಟುಗಳಿದ್ದು ಅಮೆರಿಕದ ಅಥ್ಲೀಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.







