ಪಾರ್ವತಮ್ಮ ಹೆಸರಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಪ್ರಶಸ್ತಿ: ರಾಜೇಂದ್ರ ಸಿಂಗ್ ಬಾಬು

ಬೆಂಗಳೂರು, ಜೂ.8: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.
ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಪಾರ್ವತಮ್ಮ ರಾಜ್ ಕುಮಾರ್ ಅವರಿಂದ ಕನ್ನಡ ಚಿತ್ರರಂಗ ಬೆಳೆದಿದೆ. ಕನ್ನಡ ಚಲನಚಿತ್ರದಲ್ಲಿ ಸಮಸ್ಯೆಯುಂಟಾದಾಗಲೆಲ್ಲಾ ಪಾರ್ವತಮ್ಮ ರಾಜ್ ಕುಮಾರ್ ಹೋರಾಟ ಮಾಡಿದ್ದರು. ಹಾಗಾಗಿ ಪಾರ್ವತಮ್ಮ ಹೆಸರಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ವತಿಯಿಂದ ಮಹಿಳಾ ಸಾಧಕರಿಗೆ ಒಂದು ಲಕ್ಷ ರೂ. ಮೊತ್ತದ ಪ್ರಶಸ್ತಿಯನ್ನು ಪ್ರತಿವರ್ಷ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಗಾಂಧಿ ಭವನದಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಹಿರಿಯ ನಟ ಶ್ರೀನಾಥ್, ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀ ನಾರಾಯಣ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





