ಬಿಸಿಸಿಐ ಆದಾಯದಲ್ಲಿ ಕೊಹ್ಲಿ ಹಿಂದಿಕ್ಕಿದ ಧವನ್

ಮುಂಬೈ, ಜೂ.8: ಭಾರತದ ನಾಯಕ ವಿರಾಟ್ ಕೊಹ್ಲಿ ಜಾಹೀರಾತು ಒಪ್ಪಂದದಲ್ಲಿ ಗರಿಷ್ಠ ಆದಾಯ ಹೊಂದಿದ್ದಾರೆ. ಆದರೆ, 2015-16ರ ಸಾಲಿನಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬಿಸಿಸಿಐನಿಂದ ಪಡೆದಿರುವ ತೆರಿಗೆರಹಿತ ಆದಾಯದಲ್ಲಿ ಶಿಖರ್ ಧವನ್ ಅವರು ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
ದಿಲ್ಲಿಯ ಎಡಗೈ ಬ್ಯಾಟ್ಸ್‌ಮನ್ ಧವನ್ 87.86 ಲಕ್ಷ ರೂ. ಆದಾಯ ಗಳಿಸಿದರೆ, ಕೊಹ್ಲಿ 83.07 ಲಕ್ಷ ರೂ. ಆದಾಯ ಪಡೆದಿದ್ದಾರೆ ಎಂದು ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ. ಅಜಿಂಕ್ಯ ರಹಾನೆ(81.06 ಲಕ್ಷ ರೂ.) ಮೂರನೆ ಸ್ಥಾನದಲ್ಲೂ, ಆರ್.ಅಶ್ವಿನ್ ಹಾಗೂ ರೋಹಿತ್ ಶರ್ಮ(ತಲಾ 73.02 ಲಕ್ಷ ರೂ.) ಜಂಟಿಯಾಗಿ ನಾಲ್ಕನೆ ಸ್ಥಾನದಲ್ಲಿದ್ದಾರೆ. ವರುಣ್ ಆ್ಯರೊನ್ ಅತ್ಯಂತ ಕಡಿಮೆ ಮೊತ್ತ(32.15 ಲಕ್ಷ ರೂ.) ಪಡೆದಿದ್ದಾರೆ.
ಕಳೆದ ಋತುವಿನಲ್ಲಿ ನಡೆದ ನ್ಯೂಝಿಲೆಂಡ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆದ ಸರಣಿಯ ಪಂದ್ಯ ಶುಲ್ಕಗಳನ್ನು ಆಟಗಾರರು ಸ್ವೀಕರಿಸಿದ್ದಾರೆ.
2016ರ ಐಪಿಎಲ್‌ನಲ್ಲಿ ಗಾಯದ ಪರಿಹಾರವಾಗಿ ಹಿರಿಯ ವೇಗದ ಬೌಲರ್ ಆಶೀಷ್ ನೆಹ್ರಾಗೆ 1.52 ಕೋ.ರೂ. ನೀಡಲಾಗಿದೆ. ಡಿಯಾನ ಎಡುಲ್ಜಿ ಸಹಿತ ಸಹಿತ ನಾಲ್ವರು ಮಾಜಿ ಮಹಿಳಾ ಆಟಗಾರ್ತಿಯರಿಗೆ ಬಿಸಿಸಿಐನ ಒನ್‌ಟೈಮ್ ಬೆನ್‌ಫಿಟ್ ಪ್ರಕಾರ 30 ಲಕ್ಷ ರೂ. ಪಡೆದಿದ್ದಾರೆ. ಬೆಂಗಳೂರಿನಲ್ಲಿ ಎನ್‌ಪಿಎಗಾಗಿ ಜಮೀನು ನೋಂದಣಿಗಾಗಿ 3 ಕೋ.ರೂ. ಖರ್ಚುಮಾಡಿದೆ.







