ಅಂಡರ್-20 ವಿಶ್ವಕಪ್: ಇಂಗ್ಲೆಂಡ್ ಫೈನಲ್‌ಗೆ

ಜಿಯೊಂಜು(ದಕ್ಷಿಣ ಕೊರಿಯಾ), ಜೂ.8: ಡೊಮಿನಿಕ್ ಸೋಲಂಕಿ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಇಟಲಿ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿದ ಇಂಗ್ಲೆಂಡ್ ತಂಡ ಅಂಡರ್-20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದೆ.
ಇಂಗ್ಲೆಂಡ್ ತಂಡ ಮೊದಲ ಬಾರಿ ಫೈನಲ್‌ಗೆ ತಲುಪುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದೆ.
ಲಿವರ್‌ಪೂಲ್ ಸ್ಟ್ರೈಕರ್ ಸೋಲಂಕಿ 66ನೆ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. 77ನೆ ನಿಮಿಷದಲ್ಲಿ ಗೋಲು ಬಾರಿಸಿದ ಎವರ್ಟನ್ ಅಡೆಮೊಲಾ ಲೂಕ್ಮನ್ ಇಂಗ್ಲೆಂಡ್‌ಗೆ 2-1 ಮುನ್ನಡೆ ಒದಗಿಸಿಕೊಟ್ಟರು.
88ನೆ ನಿಮಿಷದಲ್ಲಿ ಆಕರ್ಷಕ ಗೋಲು ಬಾರಿಸಿದ ಸೋಲಂಕಿ ಇಂಗ್ಲೆಂಡ್ 3-1 ಅಂತರದಿಂದ ಜಯ ಸಾಧಿಸಿ ಫೈನಲ್‌ಗೆ ತಲುಪಲು ನೆರವಾದರು. ಇಟಲಿಯ ಪರ ರಿಕಾರ್ಡೊ ಒರ್ಸೊಲಿನಿ 3ನೆ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.
ಇಂಗ್ಲೆಂಡ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ವೆನೆಜುವೆಲಾ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ವೆನೆೆಜುವೆಲಾ ತಂಡ ಉರುಗ್ವೆ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿತ್ತು.
1966ರಲ್ಲಿ ಇಂಗ್ಲೆಂಡ್‌ನ ಹಿರಿಯರ ತಂಡ ವಿಶ್ವಕಪ್‌ನ್ನು ಜಯಿಸಿದ ಬಳಿಕ ಇದೇ ಮೊದಲ ಬಾರಿ ಕಿರಿಯರ ಫುಟ್ಬಾಲ್ ತಂಡ ಫೈನಲ್‌ಗೆ ತಲುಪಿತ್ತು.







