ಕಾಸರಗೋಡು ಯಾವತ್ತಿದ್ದರೂ ನಮ್ಮದು: ಆದೇಶ ಹಿಂದೆಗೆಯದಿದ್ದರೆ ಜೂ. 12ರಂದು ಕರ್ನಾಟಕ ಬಂದ್
ಕಾಸರಗೋಡು ಚಲೋ ಹೋರಾಟದಲ್ಲಿ ವಾಟಾಳ್ ನಾಗರಾಜ್ ಕಿಡಿ

ಉಳ್ಳಾಲ, ಜೂ. 8: ಕಾಸರಗೋಡು ಯಾವತ್ತಿದ್ದರೂ ನಮ್ಮದು, ಕೇರಳ ಸರ್ಕಾರ ಕೈಗೊಂಡಿರುವ ತೀರ್ಮಾನ ಅಲ್ಪಸಂಖ್ಯಾತರ ಮೇಲೆ ನಡೆದ ದಾಳಿಯಾಗಿದ್ದು, ಅದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಒಂದು ವೇಳೆ ಕೇರಳ ಸರ್ಕಾರ ಅಂತಹ ಆದೇಶ ಹಿಂದೆಗೆಯದಿದ್ದರೆ ಜೂ.12ರಂದು ಕರ್ನಾಟಕ ಬಂದ್ ನಡೆಸಲಿದ್ದೇವೆ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಮಲಯಾಳಂ ಕಡ್ಡಾಯಗೊಳಿಸಿರುವ ಕೇರಳ ಸರ್ಕಾರದ ಧೋರಣೆ ಖಂಡಿಸಿ ಕೇರಳ ಕರ್ನಾಟಕ ಗಡಿಭಾಗ ರಾ.ಹೆ. 66ರ ತಲಪಾಡಿಯಲ್ಲಿ ಗುರುವಾರ ಕನ್ನಡ ಪರ ಸಂಘಟನೆಗಳು ಕರೆದ ‘ಕಾಸರಗೋಡು ಚಲೋ’ ಕಾರ್ಯಕ್ರಮದಲ್ಲಿ ಅವರು ಪ್ರತಿಕ್ರಿಯಿಸಿದರು.
ಕಾಸರಗೋಡು ಕನ್ನಡದ ಮಣ್ಣು, ನೂರಕ್ಕೆ ನೂರು ಕನ್ನಡಿಗರ ಗಂಡು ಮೆಟ್ಟಿದ ನೆಲ. ಇಲ್ಲಿ ಕನ್ನಡಕ್ಕೆ ಮಾನ್ಯತೆ, ಗೌರವವಿದ್ದು ಯಾವುದೇ ಕಾರಣಕ್ಕೂ ಈ ಮಣ್ಣಿನಲ್ಲಿ ಮಲಯಾಳಂ ಭಾಷೆಯ ಅಗತ್ಯತೆ ಕನ್ನಡಿಗರಿಗಿಲ್ಲ. ಕೇರಳ ಸರ್ಕಾರ ಆದೇಶ ಹಿಂದಕ್ಕೆ ಪಡೆಯದಿದ್ದಲ್ಲಿ ಕರ್ನಾಟಕದಲ್ಲಿರುವ ಮಲಯಾಳಿಗರನ್ನು ಓಡಿಸುತ್ತೇವೆ. ಕೇರಳಿಗರು ಕರ್ನಾಟಕ ತೊರೆದು ಹೋಗಬೇಕು ಎಂದು ಒತ್ತಾಯಿಸಲಾಗುವುದು ಎಂದ ಅವರು ಇಂದು ರಸ್ತೆ ತಡೆ ಮಾತ್ರ ನಡೆಸಿದ್ದೇವೆ. ಇದು ಎಚ್ಚರಿಕೆ ಅಷ್ಟೆ. ಈ ಹೋರಾಟ ಸಂಸತ್‌ನಲ್ಲೂ ಪ್ರತಿಧ್ವನಿಸಬೇಕು. ಕೇರಳದ ವಿರುದ್ಧ, ಮಲಯಾಳದ ವಿರುದ್ಧ ಜೂನ್ 12ಕ್ಕೆ ಕರ್ನಾಟಕ ಬಂದ್ ಎಂದು ನುಡಿದರು.
ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕನ್ನಡ ಕಟ್ಟೆಯ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಪ್ರಸನ್ನ ಶೆಟ್ಟಿ ಹೆಬ್ರಿ, ಗಿರೀಶ್ ಗೌಡ, ಕೆ.ಆರ್. ಕುಮಾರ, ಜಾರ್ಜ್ ಕೆ.ವಿ, ಅನ್ಸರ್ ಅಹ್ಮದ್ ಉಡುಪಿ, ಸತೀಶ್ ಪಾಟೀಲ್ ಹಾಸನ, ಸಂಶುದ್ದೀನ್ ಉಚ್ಚಿಲ್ ಹಾಗೂ ತಾಲೂಕು ಪಂ. ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸರಿಂದ ಬಿಗುಭದ್ರತೆ
ಪ್ರತಿಭಟನಾಕಾರರು 11.30ರ ಹೊತ್ತಿಗೆ ಕೇರಳ-ಕರ್ನಾಟಕ ಗಡಿ ತಲಪಾಡಿ ಪ್ರವೇಶಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕ-ಕೇರಳ ಪೊಲೀಸರಿಂದ ಬಿಗು ಭದ್ರತೆ ಏರ್ಪಡಿಸಿದ್ದು, ಪ್ರತಿಭಟನಾಕಾರರು ತಲಪಾಡಿ ಗಡಿ ದಾಟಿ ಕೇರಳದತ್ತ ಹೋಗುವುದಕ್ಕೆ ತಡೆಯೊಡ್ಡಿದರು. ಅಲ್ಲದೆ ಕರವೇ ಕಾರ್ಯಕರ್ತರು ರಸ್ತೆತಡೆ ನಡೆಸಿ ಘೋಷನೆಗಳನ್ನು ಕೂಗಿದರು. ಎಸಿಪಿ ಶೃತಿ, ಪೊಲೀಸ್ ಅಕಾರಿ ಉದಯ ನಾಯಕ್, ಕೊಣಾಜೆ ಠಾಣಾಧಿಕಾರಿ ಅಶೋಕ್ ಪಿ, ತಿಲಕ್‌ಚಂದ್ರ ಸೇರಿದಂತೆ ಕೇರಳ ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ನಿಯಂತ್ರಣಕ್ಕೆ ತಂದು ರಸ್ತೆ ಸಂಚಾರ ಸುಗಮಗೊಳಿಸಿದರು.
ವಾಟಾಳ್ ಸೇರಿದಂತೆ ಪ್ರಮುಖರ ಬಂಧನ
ಕೇರಳ ಕರ್ನಾಟಕ ಗಡಿ ಪ್ರದೇಶದಲ್ಲಿ ಕೇರಳ ಸರ್ಕಾರದ ಧೋರಣೆರಯನ್ನು ಖಂಡಿಸಿ ಕಾಸರಗೋಡು ಕಾರ್ಯಕ್ರಮದ ಸಂದರ್ಭದಲ್ಲಿ ತಲಪಾಡಿಯಲ್ಲಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಪ್ರಮುಖ ಕರವೇ ಕಾರ್ಯಕರ್ತರ ಬಂಧಿಸಿದರು.







