ಗೋಲಿಬಾರ್ ಖಂಡಿಸಿ, ಸಾಲಮನ್ನಾಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ

ತುಮಕೂರು.ಜೂ.9:ಮಧ್ಯಪ್ರದೇಶ ಸರಕಾರ ರೈತರ ಮೇಲೆ ಗೋಲಿಬಾರ್ ನಡೆಸಿರುವುದನ್ನು ಖಂಡಿಸಿ, ಎಲ್ಲಾ ರೀತಿ ಬೆಳೆ ಸಾಲ ಮನ್ನಾಗೆ ಒತ್ತಾಯಿಸಿ ಇಂದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ನಗರದ ಟೌನ್‌ಹಾಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಿದರು.
ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಅವರ ನೇತೃತ್ವದಲ್ಲಿ ಸಮಾವೇಶಗೊಂಡಿದ್ದ ನೂರಾರು ರೈತರು,ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ವಿರೋಧಿ ನೀತಿಗಳು ಹಾಗೂ ಮಧ್ಯಪ್ರದೇಶ ಸರಕಾರದ ಪ್ರತಿಭಟನಾ ನಿರತ ರೈತರ ಮೇಲೆ ಗೋಲಿಬಾರ್ ನಡೆಸಿರುವುದನ್ನು ಖಂಡಿಸಿ, ಘೋಷಣೆ ಕೂಗಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘ ಮತ್ತು ಹಸಿರುಸೇನೆಯ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಪ್ರಾಕೃತಿಕ ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯ 10 ತಾಲೂಕುಗಳ ಬರಕ್ಕೆ ತುತ್ತಾಗಿದ್ದು, ಸರಕಾರವೇ ನೀಡಿರುವ ಅಂಕಿಅಂಶದಂತೆ 25 ಲ.ಕ್ಕೂ ಹೆಚ್ಚು ತೆಂಗಿನ ಮರಗಳು ಒಣಗಿವೆ. ಕೋಟ್ಯಾಂತರ ಅಡಿಕೆ ಮರಗಳು ನೆಲಕ್ಕುರುಳಿವೆ.ತೋಟ ತುಡಿಕೆ ಉಳಿಸಿಕೊಳ್ಳಲು ಕೊರೆಸಿರುವ ಸುಮಾರು 80 ಸಾವಿರಕ್ಕೂ ಅಧಿಕ ಕೊಳವೆ ಬಾವಿಗಳು ಒಣಗಿದ್ದು, ಮಾಡಿದ ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾನೆ.
ಸಾಲ ಮನ್ನಾ ಮಾಡುವಂತೆ ಹಂತ ಹಂತವಾಗಿ ಹೋರಾಟ ನಡೆಸಿದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಬ್ಬರ ಮೇಲೆ ಒಬ್ಬರು ದೋಷಾರೋಪಣೆ ಹೊರಿಸುವ ಮೂಲಕ ರೈತರ ಬದುಕಿನೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ಸಾಲ ಮನ್ನಾದ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳದಿದ್ದರೆ ರೈತರು ಬೀದಿಗಿಳಿಯುವುದು ಅನಿವಾರ್ಯ ಎಂದರು.
ಮಹಾಮೈತ್ರಿಗಾಗಿ ಜನಾಂದೋಲನ ವೇದಿಕೆಯ ಸಿ.ಯತಿರಾಜು ಮಾತನಾಡಿ,ಸಾಲ ಮನ್ನಾಕ್ಕೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ.ಮಧ್ಯ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಗೋಲಿಬಾರ್ ನಡೆಸುವ ಮೂಲಕ ಅಲ್ಲಿನ ಸರಕಾರ 7 ಜನ ರೈತರನ್ನು ಬಲಿತೆಗೆದುಕೊಂಡಿದೆ.ಮಹಾರಾಷ್ಟ್ರದಲ್ಲಿ ಮತ್ತು ತಮಿಳುನಾಡಿನಲ್ಲಿ ಈಗಾಗಲೇ ಸಾಲಮನ್ನಾಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆಗಳು ಆರಂಭವಾಗಿವೆ.ಮುಂದೊಂದು ದಿನ ಇದು ಜನಾಂದೋಲನವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಸರಕಾರ ಈಗಲೇ ಎಚ್ಚೆತ್ತು ರೈತರ ಬೇಡಿಕೆ ಈಡೇರಿಸುವತ್ತ ಗಮನಹರಿಸಬೇಕಿದೆ.
ಚುನಾವಣೆ ಪೂರ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಎಂ.ಎಸ್.ಸ್ವಾಮೀನಾಥನ್ ವರದಿಯನ್ನು ಜಾರಿಗೆ ತರುವ ಭರವಸೆ ನೀಡಿತ್ತು.ಆದರೆ ಇದುವರೆಗೂ ಅದು ಜಾರಿಗೆ ಬಂದಿಲ್ಲ. ವರದಿಯ ಪ್ರಕಾರ ಒಂದು ವೇಳೆ ರೈತರ ಬೆಳೆ ನಷ್ಟವಾದರೆ ನಷ್ಟದ ಪ್ರಮಾಣದ ಒಂದುವರೆ ಪಟ್ಟು ಪರಿಹಾರ ನೀಡಬೇಕೆಂಬ ಶಿಫಾರಸ್ಸು ಮಾಡಲಾಗಿದೆ. ಇದುವರೆಗೂ ಯಾವ ಸರಕಾಗಳು ಈ ವರದಿಯ ಬಗ್ಗೆ ದ್ವನಿ ಎತ್ತಿಲ್ಲ ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಚಿಕ್ಕಬೋರೇಗೌಡ, ಕೆಂಚಪ್ಪ, ಹನುಮಯ್ಯ, ರವೀಶ್, ಲೋಕೇಶ್, ಲಕ್ಷ್ಮಣಗೌಡ, ವಿರೂಪಾಕ್ಷ, ಜನ ಸಂಗ್ರಾಮ ಪರಿಷತ್ತಿನ ಪಂಡಿತ್ ಜವಹರ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.







