ವಸತಿಗಾಗಿ ಹೋರಾಟ ಸಮಿತಿಯಿಂದ ಪ್ರತಿಭಟನೆ
ಮೂಡಿಗೆರೆ, ಜೂ.9: ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ಹಳೇ ಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿ ತಾ.ಪಂ. ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗುರುದತ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.
ಈ ವೇಳೆ ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷ ಬಿ.ರುದ್ರಯ್ಯ ಮಾತನಾಡಿ, ಹಳೆ ಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯ ಸರ್ವೋದಯನಗರ, ಹ್ಯಾಂಡ್‌ಪೋಸ್ಟ್, ಶಾಂತಿನಗರ ಹಾಗೂ ಬಾಪೂಜಿನಗರದ ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕೆಂದು ಅನೇಕ ಬಾರಿ ಪ್ರತಿಭಟನೆ ನಡೆಸಿ ಮನವಿಯನ್ನು ಸಲ್ಲಿಸಿದರೂ, ಸರಕಾರಿ ಭೂಮಿಯಿಲ್ಲವೆಂದು ನಮ್ಮ ಮನವಿಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಈ ಹಿನ್ನಲೆಯಲ್ಲಿ ವೇದಿಕೆಯಿಂದಲೇ ಸ.ನಂ.1ರಲ್ಲಿ 140 ಎಕರೆ ಗೋಮಾಳ, ಸ.ನಂ.289ರಲ್ಲಿ 33 ಎಕರೆ ಹಾಗೂ ಸ.ನಂ.7 ರಲ್ಲಿ 11 ಎಕರೆ ಸರಕಾರಿ ಭೂಮಿ ದಾಖಲೆಯನ್ನು ನೀಡಲಾಗಿತ್ತು. ಸರಕಾರಿ ಜಮೀನೆಂದು ಸಾಬೀತಾಗಿರುವ ಸ.ನಂ.7ರಲ್ಲಿ ಕಳೆದ ಎ.12ರಂದು ಭೂ ಅಕ್ರಮ ಚಳುವಳಿ ಮೂಲಕ ಗುಡಿಸಲು ನಿರ್ಮಿಸಿ ಧರಣಿ ನಡೆಸಿ ಗಮನ ಸೆಳೆಯಲಾಗಿತ್ತು. ಆದರೆ ಈತನಕ ನಿವೇಶನ ರಹಿತರ ಪಟ್ಟಿ ತಯಾರಿಸಿ, ನಿವೇಶನ ಹಂಚಿಕೆ ಮಾಡದೇ ವಿಳಂಬ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಿವೇಶನ ಹಂಚಿಕೆ ಮಾಡುತ್ತೇವೆಂದು ಅಧಿಕಾರಿಗಳು ಭರವಸೆ ನೀಡಿ ಎರಡು ತಿಂಗಳಾದರೂ ಯಾವುದೇ ಬೆಳವಣಿಗೆಗಳು ನಡೆಸಿಲ್ಲ. ಹೀಗಾಗಿ ಸಮಸ್ಯೆ ಗಂಭೀರತೆ ಇರುವುದರಿಂದ ಭ್ರಷ್ಟಾಚಾರ, ಧರ್ಮ, ಜಾತಿ, ಭಾಷೆ, ಸ್ವಜನ ಪಕ್ಷಪಾತಕ್ಕೆ ಅವಕಾಶ ಕೊಡದೇ, ಯವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ನಿವೇಶನವನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ಹಂಚಿಕೆ ಮಾಡಬೇಕು. ಇಲ್ಲವಾದರೆ ಹೋರಾಟ ಇನ್ನೂ ತೀವ್ರವಾಗಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಪ್ರತಿಭಟನಾಕಾರರು ಹಳೆಮೂಡಿಗೆರೆ ಗ್ರಾ.ಪಂ.ಯಿಂದ ಪಟ್ಟಣದ ಕೆ.ಎಂ.ರಸ್ತೆ ಮೂಲಕ ತಾ.ಪಂ. ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನೆಯಲ್ಲಿ ವಸತಿಗಾಗಿ ಹೋರಾಟ ವೇದಿಕೆ ಕಾರ್ಯದರ್ಶಿ ಶಿವಪ್ಪ, ಬಿಎಸ್‌ಪಿ ಮುಖಂಡ ರಾಮು, ವಿಜಯ, ದತ್ತ, ಕೆಂಚಪ್ಪ, ರಮೇಶ, ವಿಠಲ, ಸಂತೋಷ್, ರುಕ್ಮಿಣಿ, ರತ್ನ, ಬಬಿತ ಮತ್ತಿತರಿದ್ದರು.







