ಮದ್ರಸಕ್ಕೆ ನುಗ್ಗಿ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಬಂಟ್ವಾಳ, ಜೂ. 9: ಮದ್ರಸದ ಬಾಗಿಲು ತೆರೆದು ಒಳ ನುಗ್ಗಿದ ಕಿಡಿಗೇಡಿಗಳು ಪೀಠೋಪಕರಣಕ್ಕೆ ಬೆಂಕಿ ಹಚ್ಚಿರುವ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಎಲ್ಪೆಲ್ ಎಂಬಲ್ಲಿ ನಡೆದಿದೆ.
ಮಾವಿನ ಕಟ್ಟೆ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಪೆಲ್‌ನಲ್ಲಿರುವ ಜಲಾಲಿಯಾ ಮದ್ರಸಕ್ಕೆ ನುಗ್ಗಿದ ಕಿಡಿಗೇಡಿಗಳು ಪೀಠೋಪಕರಣಕ್ಕೆ ಬೆಂಕಿ ಹಚ್ಚಿದ್ದಾರೆ. ಶುಕ್ರವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಮದ್ರಸದ ಬಾಗಿಲಿಗೆ ಚಿಲಕ ಹಾಕಿತ್ತಾದರೂ ಬೀಗ ಹಾಕಿರಲಿಲ್ಲ. ಇದರಿಂದ ಸುಲಭವಾಗಿ ಮದ್ರಸದೊಳಗೆ ನುಗ್ಗಿದ ಕಿಡಿಗೇಡಿಗಳು ನಮಾಝ್ ಗೆ ಬಳಸುವ ಮುಸಲ್ಲಾವನ್ನು ಡೆಸ್ಕ್‌ನ ಮೇಲಿಟ್ಟು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚಲು ಸೀಮೆ ಎಣ್ಣೆ ತಂದಿರುವುದು ಬಾಟಲಿ ಸ್ಥಳದಲ್ಲಿ ಪತ್ತೆಯಾಗಿದೆ. ಬೆಂಕಿಯಿಂದ ಡೆಸ್ಕ್ ಮತ್ತು ಕಿಟಕಿಯ ಬಾಗಿಲುಗಳು ಸ್ವಲ್ಪ ಪ್ರಮಾಣದಲ್ಲಿ ಸುಟ್ಟು ಹೋಗಿದೆ.
ಈ ಬಗ್ಗೆ ಮಾವಿನ ಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಅಬ್ದುರ್ರಝಾಕ್ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಖಂಡನೆ: ಮದ್ರಸಕ್ಕೆ ಬೆಂಕಿ ಹಚ್ಚಿರುವ ಘಟನೆಯನ್ನು ಮಾವಿನ ಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಖಂಡಿಸಿದ್ದಾರೆ. ಈ ಘಟನೆ ಕೋಮು ಗಲಭೆ ಸೃಷ್ಟಿಸುವ ಪೂರ್ವ ಯೋಜಿತ ಕೃತ್ಯವಾಗಿದೆ ಎಂದಿರುವ ಪಿಎಫ್‌ಐ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಇಕ್ಬಾಲ್ ಬಳ್ಳಮಂಜ, ಬೆಂಕಿ ಹಚ್ಚಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ರಮಝಾನ್ ತಿಂಗಳಲ್ಲಿ ಎಲ್ಲ ಮಸೀದಿ, ಮದ್ರಸಗಳಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.