ಕೋರ್ ಕಮಿಟಿ ಮೂಲಕ ಅಭ್ಯರ್ಥಿಗಳ ಶಿಫಾರಸ್ಸು - ಪಕ್ಷಾಂತರಿಗಳಿಗಿಲ್ಲ ಟಿಕೆಟ್ : ಮಂಜುನಾಥ ಭಂಡಾರಿ

ಶಿವಮೊಗ್ಗ, ಜೂ. 9: ’ಮುಂಬರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಪೂರ್ವಭಾವಿ ತಯಾರಿ ನಡೆಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ಪಕ್ಷ ಸಂಘಟನೆ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ಮುಖಂಡರು - ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಲಾಗುತ್ತಿದೆ’ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎ.ಐ.ಸಿ.ಸಿ.) ಯ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪಕ್ಷದ ವರಿಷ್ಠರು ನಡೆಸುತ್ತಾರೆ. ಆದರೆ ಜಿಲ್ಲಾ ಸಮಿತಿಯು ಯಾವ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಯಾದರೇ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯವನ್ನು ವರಿಷ್ಠರಿಗೆ ಸಲ್ಲಿಸಲಿದೆ. ಇಂತಹ ಕ್ಷೇತ್ರಗಳಿಗೆ ಇಂತಹವರಿಗೆ ಟಿಕೆಟ್ ನೀಡಬೇಕೆಂಬ ಶಿಫಾರಸ್ಸು ಮಾಡಲಿದೆ. ಅಭ್ಯರ್ಥಿಗಳ ಹೆಸರು ಶಿಫಾರಸ್ಸು ಮಾಡುವುದಕ್ಕಾಗಿಯೇ ಪ್ರತ್ಯೇಕ ಕೋರ್ ಕಮಿಟಿ ರಚನೆ ಮಾಡಲಾಗುವುದು. ಈ ಕಮಿಟಿಯು ಅಭ್ಯರ್ಥಿಗಳ ಹೆಸರು ಶಿಫಾರಸ್ಸು ಮಾಡುವುದಕ್ಕೂ ಮುನ್ನ ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಿದೆ ಎಂದರು.
ಅಧಿಕಾರದ ಆಸೆಗೆ, ಅಭ್ಯರ್ಥಿಯಾಗುವ ಉದ್ದೇಶದಿಂದ ಪಕ್ಷಕ್ಕೆ ಆಗಮಿಸುವವರನ್ನು ಯಾವುದೇ ಕಾರಣಕ್ಕೂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಪರಿಗಣನೆ ಮಾಡುವುದಿಲ್ಲ. ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಿರುವ, ಕ್ಷೇತ್ರದಲ್ಲಿ ಉತ್ತಮ ಹೆಸರು ಉಳಿಸಿಕೊಂಡಿರುವ, ಗೆಲ್ಲುವ ಸಾಮರ್ಥ್ಯವಿರುವವರನ್ನು ಮಾತ್ರ ಅಭ್ಯರ್ಥಿ ಆಯ್ಕೆಗೆ ಜಿಲ್ಲಾ ಸಮಿತಿ ಶಿಫಾರಸ್ಸು ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಗೆಲುವು ನಿಶ್ಚಿತ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದರು. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಂಜುನಾಥ ಭಂಡಾರಿಯವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಪಾರದರ್ಶಕ ಆಡಳಿತವೇ ಗೆಲುವಿಗೆ ಪೂರಕವಾಗಿದ್ದು, ಅತ್ಯಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯ ಸಾಧಿಸಲಿದೆ. ಮತ್ತೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.







