ಅಶಿಸ್ತಿನ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಕ್ರಮ: ಮೇಯರ್ ಪದ್ಮಾವತಿ
ಬೆಂಗಳೂರು, ಜೂ.9: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸರಕಾರಿ ಆಸ್ಪತ್ರೆಗಳಿಗೆ ತಡವಾಗಿ ಬರುವ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಪದ್ಮಾವತಿ ತಿಳಿಸಿದ್ದಾರೆ.
ಶುಕ್ರವಾರ ಬಿಬಿಎಂಪಿಯ ವಿವಿಧ ಹೆರಿಗೆ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ ಅವರು, ಶಿಸ್ತು ಇಲ್ಲದಿದ್ದರೆ ಕೆಲಸಗಳು ಸರಿಯಾದ ಸಮಯಕ್ಕೆ ಆಗುವುದಿಲ್ಲ. ಇದರಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಅದರಲ್ಲೂ ಆಸ್ಪತ್ರೆಗಳಲ್ಲಿ ಶಿಸ್ತು ಇಲ್ಲದಿದ್ದರೆ ಗಂಭೀರವಾದ ಪರಿಣಾಮವನ್ನು ಎದುರಿಸುವಂತಾಗುತ್ತದೆ. ಇಂತಹದಕ್ಕೆ ಸಿಬ್ಬಂದಿಗಳು ಅವಕಾಶ ಮಾಡಿಕೊಡಬಾರದು ಎಂದು ಆಶಿಸಿದರು.
ರಾಜಾಜಿನಗರದಲ್ಲಿರುವ ಬಿಬಿಎಂಪಿಯ ಡಾ. ನಾಗರಾಜ್ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಗರ್ಭಿಣಿಯರಿಗೆ ಒದಗಿಸಲಾಗುವ ‘ಮಡಿಲು ಕಿಟ್’ ಯೋಜನೆಗಳ ಬಗ್ಗೆ ಅಲ್ಲಿನ ಗರ್ಭಿಣಿಯರಿಂದಲೇ ಮಾಹಿತಿಯನ್ನು ಪಡೆದುಕೊಂಡರು. ಆಪರೇಷನ್ ಥಿಯೇಟರ್‌ನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ನಂತರ ಪ್ರತಿಕ್ರಿಯಿಸಿ, ಆಸ್ಪತ್ರೆಗೆ ಅಗತ್ಯ ಸೌಲಭ್ಯಗಳು ಬೇಕಾಗಿದ್ದಲ್ಲಿ ಮೇಯರ್ ಅನುದಾನದಿಂದಲೇ ಒದಗಿಸಲಾಗುವುದು. ಪ್ರತಿ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಓವರ್ ಹೆಡ್ ನೀರಿನ ಟ್ಯಾಂಕ್‌ಗಳನ್ನೂ ತಮ್ಮ ಅನುದಾನದಿಂದಲೇ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು.
ನಂತರ ಮಾಗಡಿ ರಸ್ತೆಯ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ನಿರ್ವಹಣೆಯಲ್ಲಿದ್ದ ಕೆಲವು ಅವ್ಯವಸ್ಥೆಗಳನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಮುಂದಿನ ಭೇಟಿ ಅವಧಿಯಲ್ಲಿ ಯಾವುದೇ ಕುಂದು ಕೊರತೆ ಇರಬಾರದು ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪಾಲಿಕೆ ಹೆರಿಗೆ ಆಸ್ಪತ್ರೆಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನೂ ಸದ್ಭಳಕೆ ಮಾಡಿಕೊಳ್ಳಬೇಕು ಹಾಗೂ ಬಡ ರೋಗಿಗಳಿಗೆ ಯಾವುದೇ ಅನಾನುಕೂಲವಾಗದಂತೆ ನಿಗಾ ವಹಿಸಬೇಕೆಂದು ಅವರು ತಿಳಿಸಿದರು.







