ಹೊಸದಾಗಿ ಇಬ್ಬರು ಸಿಖ್ಖರ ಆಯ್ಕೆ: ಹೌಸ್ ಆಫ್ ಕಾಮನ್ಸ್‌ನಲ್ಲಿ ಭಾರತ ಮೂಲದ ಸದಸ್ಯರ ಸಂಖ್ಯೆ 12ಕ್ಕೆ ಏರಿಕೆ

ಲಂಡನ್, ಜೂ. 9: ತನ್‌ಮಂಜೀತ್ ಸಿಂಗ್ ದೇಸಿ ಬ್ರಿಟಿಶ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ಗೆ ಆಯ್ಕೆಯಾದ ಮೊದಲ ಪೇಟಧಾರಿ ಸಿಖ್ ಮತ್ತು ಪ್ರೀತ್ ಕೌರ್ ಗಿಲ್ ಮೊದಲ ಸಿಖ್ ಮಹಿಳೆಯಾಗಿದ್ದಾರೆ.
ಕಳೆದ ಸಂಸತ್ತಿನಲ್ಲಿದ್ದ 10 ಭಾರತ ಮೂಲದ ಸಂಸದರು ಶುಕ್ರವಾರ ಪ್ರಕಟಗೊಂಡ ಮಧ್ಯಾಂತರ ಚುನಾವಣೆಯ ಫಲಿತಾಂಶದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಅವರ ಪೈಕಿ ಐವರು ಲೇಬರ್ ಪಕ್ಷದವರು ಮತ್ತು ಉಳಿದ ಐವರು ಕನ್ಸರ್ವೇಟಿವ್ ಪಕ್ಷದವರು.
ಭಾರತ ಮೂಲದ ಸಂಸದರ ಪಟ್ಟಿಗೆ ಈಗ ಈ ಇಬ್ಬರು ಸಿಖ್ಖರು ಸೇರ್ಪಡೆಗೊಂಡಿದ್ದಾರೆ.
ಚುನಾವಣೆಯಲ್ಲಿದ್ದ 50ಕ್ಕೂ ಅಧಿಕ ಭಾರತ ಮೂಲದ ಅಭ್ಯರ್ಥಿಗಳ ಪೈಕಿ ಈ 12 ಮಂದಿಯನ್ನು ಹೊರತುಪಡಿಸಿ ಉಳಿದವರು ಪರಾಭವಗೊಂಡಿದ್ದಾರೆ.
ದೇಸಿ ಮತ್ತು ಗಿಲ್ ಇಬ್ಬರೂ ಪ್ರತಿಪಕ್ಷ ಲೇಬರ್ ಪಕ್ಷದವರು.
ಲೇಬರ್ ಪಕ್ಷದ ಇನ್ನೋರ್ವ ಪೇಟಧಾರಿ ಸಿಖ್ ಕುಲ್ದೀಪ್ ಸಹೋಟ ಕೇವಲ 720 ಮತಗಳಿಂದ ಸೋತರು.
ಹಿರಿಯ ಲೇಬರ್ ನಾಯಕ ಕೀತ್ ವಾಝ್ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವರ ಸಹೋದರಿ ವಲೇರೀ ವಾಝ್ ಕೂಡ ವಾಲ್‌ಸಾಲ್ ಸೌತ್‌ನ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.







